
ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಉಗ್ರರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ಒಳಗೊಂಡ ದೇಶದ ಮೊತ್ತಮೊದಲ ಭಯೋತ್ಪಾದಕ ನಿಗ್ರಹ ನೀತಿ ‘ಪ್ರಹಾರ್’ ಅನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಅನಾವರಣಗೊಳಿಸಿದೆ.
ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ಅನುಸರಿಸುವುದು, ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸುವುದು, ತನಿಖೆಯ ಪ್ರತಿಯೊಂದು ಹಂತದಲ್ಲೂ ಕಾನೂನು ತಜ್ಞರ ಸೇವೆ ಲಭ್ಯವಾಗುವಂತೆ ಮಾಡುವುದು ಹಾಗೂ ಭಯೋತ್ಪಾದಕರಿಗೆ ಹಣಕಾಸಿನ ನೆರವು, ಶಸ್ತ್ರಾಸ್ತ್ರಗಳು ಲಭ್ಯವಾಗುವುದನ್ನು ತಡೆಯುವ ಗುರಿಯನ್ನು ಈ ನೀತಿ ಹೊಂದಿದೆ.
ಗೃಹ ಸಚಿವಾಲಯ ಸಿದ್ಧಪಡಿಸಿರುವ ಒಂಬತ್ತು ಪುಟಗಳ ‘ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ’ ನೀತಿಯು, ‘ದೇಶದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ಡ್ರೋನ್‌ಗಳು ಹಾಗೂ ರೊಬಾಟಿಕ್ಸ್ ಅನ್ನು ಭಯೋತ್ಪಾದನೆಗಾಗಿ ದುರುಪಯೋಗಪಡಿಸಿಕೊಳ್ಳುವುದು’ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
‘ಭಾರತದ ನೆರೆಯ ಪ್ರದೇಶದಲ್ಲಿ ಒಮ್ಮೊಮ್ಮೆ ಅರಾಜಕತೆ ತಲೆದೋರಿರುವ ಇತಿಹಾಸವಿದೆ. ನೆರೆಯ ಕೆಲವು ದೇಶಗಳು ಭಯೋತ್ಪಾದನೆಯನ್ನು ತಮ್ಮ ಸರ್ಕಾರದ ನೀತಿಯ ಸಾಧನವಾಗಿ ಬಳಸಿಕೊಂಡಿವೆ’ ಎಂದು ಪಾಕಿಸ್ತಾನವನ್ನು ಹೆಸರಿಸದೆಯೇ ತಿಳಿಸಿದೆ.
‘ಇದರ ಹೊರತಾಗಿಯೂ, ಭಾರತವು ಭಯೋತ್ಪಾದನೆಯನ್ನು ಯಾವುದೇ ನಿರ್ದಿಷ್ಟ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆ ಜತೆ ತಳಕು ಹಾಕುವ ಕೆಲಸ ಮಾಡಿಲ್ಲ. ಎಲ್ಲ ರೀತಿಯ ಭಯೋತ್ಪಾದಕ ಚಟುವಟಿಕೆಗಳನ್ನು ಖಂಡಿಸಿದೆ’ ಎಂದಿದೆ.
‘ಭಾರತವು ಬಹಳ ಹಿಂದಿನಿಂದಲೂ ಗಡಿಯಾಚೆಗಿನ ಭಯೋತ್ಪಾದನೆಯಿಂದ ತೊಂದರೆ ಅನುಭವಿಸಿದೆ. ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಅಂಗ ಸಂಸ್ಥೆಗಳು ಭಯೋತ್ಪಾದಕ ದಾಳಿ ಯೋಜಿಸುವುದು, ಸಂಘಟಿಸುವುದು ಮತ್ತು ಕಾರ್ಯಗತಗೊಳಿಸುವುದನ್ನು ಮುಂದುವರಿಸಿವೆ. ಸ್ಲೀಪರ್ ಸೆಲ್‌ಗಳ ಮೂಲಕ ದೇಶದಲ್ಲಿ ಹಿಂಸೆ ಹರಡಲು ಪ್ರಯತ್ನಿಸುತ್ತಿರುವ ಅಲ್ ಕೈದಾ ಮತ್ತು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳಿಗೆ ಭಾರತ ಗುರಿಯಾಗಿದೆ’ ಎಂದು ಹೇಳಿದೆ.
ದೇಶ ಎದುರಿಸುತ್ತಿರುವ ಬೆದರಿಕೆ...
ಅಲ್ ಕೈದಾ, ಐಸಿಸ್ ಸೇರಿದಂತೆ ಇತರ ಭಯೋತ್ಪಾದಕರ ಸಂಘಟನೆಗಳ ಗುರಿಯಾಗಿರುವುದು
ಗಡಿಯಾಚೆಗಿನ ಹ್ಯಾಂಡ್ಲರ್ ಗಳಿಂದ ಡ್ರೋನ್‌ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನದ ಬಳಕೆ
ಕ್ರಿಮಿನಲ್ ನೆಟ್‌ವರ್ಕ್‌ಗಳನ್ನು ಬಳಸಿ ಉಗ್ರರನ್ನು ನೇಮಿಸಿ
ಕೊಳ್ಳುವುದು
ಉಗ್ರರಿಂದ ಕೋಡ್ ವರ್ಡ್‌ಗಳು, ಡಾರ್ಕ್ ವೆಬ್, ಕ್ರಿಪ್ಟೊ ವ್ಯಾಲೆಟ್‌ಗಳ ಬಳಕೆ
ಡ್ರೋನ್‌ಗಳು, ರೊಬಾಟಿಕ್ಸ್ ಗಳ ದುರುಪಯೋಗ
ಕ್ರಿಮಿನಲ್ ಹ್ಯಾಕರ್‌ಗಳು, ಸೈಬರ್ ದಾಳಿ ಮೂಲಕ ದೇಶ ವನ್ನು ಗುರಿಯಾಗಿಸಿರುವುದು
‘ಪ್ರಹಾರ್’ ನೀತಿಯ 7 ಅಂಶಗಳು
ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟುವುದು
ದಾಳಿ ನಡೆದಾಗ ತಕ್ಷಣ ಪ್ರತಿಕ್ರಿಯಿಸುವುದು
ಉಗ್ರರ ವಿರುದ್ಧದ ಹೋರಾಟಕ್ಕೆ ದೇಶದ ಎಲ್ಲ ಆಂತರಿಕ ಸಾಮರ್ಥ್ಯಗಳನ್ನು ಒಗ್ಗೂಡಿಸುವುದು
ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಸಂದರ್ಭ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು
ಭಯೋತ್ಪಾದನೆ ಪ್ರೋತ್ಸಾಹಿಸುವ ಪರಿಸ್ಥಿತಿಗಳನ್ನು ದುರ್ಬಲಗೊಳಿಸುವುದು
ಭಯೋತ್ಪಾದನೆಯನ್ನು ಎದುರಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಒಂದುಗೂಡಿಸುವುದು
ಭಯೋತ್ಪಾದಕ ದಾಳಿ ನಡೆದರೆ ಸಂಪೂರ್ಣ ಸಮಾಜವನ್ನು ತೊಡಗಿಸಿಕೊಂಡು ಪುನರ್ರಚನೆ ಮತ್ತು ಪುನಶ್ಚೇತನಕ್ಕೆ ಪ್ರಯತ್ನಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.