ADVERTISEMENT

ಆಮದು-ಪೂರೈಕೆ ನಡೆಯುತ್ತಿರುತ್ತದೆ: ಬಿಜೆಪಿ ತೊರೆದ ಒಬಿಸಿ ನಾಯಕರ ಬಗ್ಗೆ ಅನುಪ್ರಿಯಾ

ಪಿಟಿಐ
Published 30 ಜನವರಿ 2022, 14:57 IST
Last Updated 30 ಜನವರಿ 2022, 14:57 IST
ಕೇಂದ್ರ ಸಚಿವೆ ಹಾಗೂ ಅಪ್ನಾ ದಲ್‌ (ಎಸ್‌) ಅಧ್ಯಕ್ಷೆ ಅನುಪ್ರಿಯಾ ಪಟೇಲ್‌ (ಪಿಟಿಐ ಚಿತ್ರ)
ಕೇಂದ್ರ ಸಚಿವೆ ಹಾಗೂ ಅಪ್ನಾ ದಲ್‌ (ಎಸ್‌) ಅಧ್ಯಕ್ಷೆ ಅನುಪ್ರಿಯಾ ಪಟೇಲ್‌ (ಪಿಟಿಐ ಚಿತ್ರ)   

ಲಖನೌ: ಚುನಾವಣೆಗೂ ಮೊದಲು ನಾಯಕರ 'ಆಮದು-ಪೂರೈಕೆ' ಪ್ರಕ್ರಿಯೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಬಿಜೆಪಿಯನ್ನು ತೊರೆದ ಒಬಿಸಿ ನಾಯಕರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವೆ ಹಾಗೂ ಅಪ್ನಾ ದಲ್‌ (ಎಸ್‌) ಅಧ್ಯಕ್ಷೆ ಅನುಪ್ರಿಯಾ ಪಟೇಲ್‌ ತಿಳಿಸಿದ್ದಾರೆ.

'ಚುನಾವಣೆಗೂ ಪೂರ್ವ ನಾಯಕರು ಪಕ್ಷಾಂತರಗೊಳ್ಳುವುದು ಸಂಪ್ರದಾಯವಾಗಿದೆ. ಆಗಮನ-ನಿರ್ಗಮನ, ಆಮದು-ಪೂರೈಕೆ ನಡೆಯುತ್ತಿರುತ್ತದೆ. ಜನರು ಇದನ್ನು ಸಕಾರಾತ್ಮಕ ಬೆಳವಣಿಗೆಯೆಂದು ಪರಿಗಣಿಸುವುದಿಲ್ಲ. ಅವಕಾಶವಾದಿತನ ಎಂದೇ ಅರ್ಥೈಸಿಕೊಳ್ಳುತ್ತಾರೆ' ಎಂದು ಅನುಪ್ರಿಯಾ ಪಟೇಲ್‌ ಅವರು ಪಿಟಿಐ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅನುಪ್ರಿಯಾ ಅವರು ಬಿಜೆಪಿ ಮಿತ್ರ ಪಕ್ಷ ಅಪ್ನಾ ದಲ್‌ನ ಹಿಂದುಳಿದ ವರ್ಗದ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ADVERTISEMENT

'ಉತ್ತರ ಪ್ರದೇಶದಲ್ಲಿ ಶೇಕಡಾ 50ರಷ್ಟು ಜನ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಇವರು ಯಾವ ಕಡೆಗೆ ಹೋಗುತ್ತಾರೋ ಆ ಕಡೆಗೆ ಅಧಿಕಾರವೂ ಹೋಗುತ್ತದೆ. 2017ರಂತೆ 2022ರಲ್ಲೂ ಎನ್‌ಡಿಎಗೆ ಹಿಂದುಳಿದ ವರ್ಗದ ಬೆಂಬಲ ಸಿಗುತ್ತದೆ' ಎಂದು ಅನುಪ್ರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯ ಭಾಗವಾಗಿ ಅಪ್ನಾ ದಲ್‌ ಪಕ್ಷಕ್ಕೆ 11 ಸೀಟುಗಳ ಹಂಚಿಕೆಯಾಗಿತ್ತು. ಈ ಪೈಕಿ 9 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಮುಂದಿನ ತಿಂಗಳು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದೆ. ಈ ನಡುವೆ ಒಬಿಸಿ ನಾಯಕರಾದ ಸ್ವಾಮಿ ಪ್ರಸಾದ್‌ ಮೌರ್ಯ, ದಾರಾ ಸಿಂಗ್‌ ಚೌಹಾಣ್‌ ಮತ್ತು ಧರಮ್‌ ಸಿಂಗ್‌ ಸೈನಿ ಅವರು ಯೋಗಿ ಆದಿತ್ಯನಾಥ್‌ ಅವರ ಸಂಪುಟ ಮತ್ತು ಬಿಜೆಪಿಯನ್ನು ತೊರೆದಿದ್ದಾರೆ. ಕೆಲವು ಶಾಸಕರ ಜೊತೆಗೆ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ(ಎಸ್‌ಪಿ)ಗೆ ಸೇರಿದ್ದಾರೆ.

ಮಗಳು ಬಿಜೆಪಿ ಜೊತೆ, ಅಮ್ಮ ಎಸ್‌ಪಿ ಜೊತೆ:

ಅನುಪ್ರಿಯಾ ಅವರ ತಾಯಿ ಕೃಷ್ಣಾ ಪಟೇಲ್‌ ಅವರು ಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅನುಪ್ರಿಯಾ, 'ನನ್ನ ತಾಯಿ ಸ್ವತಂತ್ರರು. ಅವರು ಯಾವುದೇ ಪಕ್ಷದ ಜೊತೆಗೆ ಹೋಗಲು ಸ್ವತಂತ್ರರು. ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು, ಮತದಾರರು ಡಾ. ಸೋನೆಲಾಲ್‌ ಪಟೇಲ್‌ ಸ್ಥಾಪಿಸಿದ ಅಪ್ನಾ ದಲ್‌ ಪಕ್ಷದ ಜೊತೆಗೆ ಇದ್ದಾರೆ ಎಂಬುದನ್ನು ಕಳೆದ ಮೂರು ಚುನಾವಣೆಗಳು ಸಾಬೀತು ಪಡಿಸಿವೆ' ಎಂದಿದ್ದಾರೆ.

1995ರಲ್ಲಿ ಅನುಪ್ರಿಯಾ ಅವರ ತಂದೆ ಡಾ. ಸೋನೆಲಾಲ್‌ ಪಟೇಲ್‌ ಅವರು ಅಪ್ನಾ ದಲ್‌ ಪಕ್ಷವನ್ನು ಸ್ಥಾಪಿಸಿದರು. 2009ರಲ್ಲಿ ಅಪಘಾತವೊಂದರಲ್ಲಿ ಸೋನೆಲಾಲ್‌ ಮೃತಪಟ್ಟರು. ಬಳಿಕ ಮಗಳು ಅನುಪ್ರಿಯಾ ಸಕ್ರಿಯ ರಾಜಕರಣಕ್ಕೆ ಇಳಿದರು.

ತಾಯಿ ಮತ್ತು ಮಗಳ ನಡುವಣ ಭಿನ್ನಾಭಿಪ್ರಾಯದಿಂದ ಅಪ್ನಾ ದಲ್‌ ಇಬ್ಭಾಗವಾಯಿತು. 2012ರಿಂದ ಇಲ್ಲಿಯ ವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಅನುಪ್ರಿಯಾ ಪಟೇಲ್‌ ಗೆದ್ದಿದ್ದಾರೆ. ಆದರೆ ಅವರ ತಾಯಿಯ ಪಕ್ಷ ಇದುವರೆಗೆ ಕನಿಷ್ಠ ಒಂದೂ ಸ್ಥಾನವನ್ನು ಗೆದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.