ADVERTISEMENT

‘ಒಂದು ರಾಷ್ಟ್ರ, ಒಂದು ಚುನಾವಣೆ’ ಅನುಷ್ಠಾನ ದೇಶಕ್ಕೆ ಗೆಲುವಿನ ಸನ್ನಿವೇಶ: ಠಾಕೂರ್

ಪಿಟಿಐ
Published 22 ಏಪ್ರಿಲ್ 2025, 9:48 IST
Last Updated 22 ಏಪ್ರಿಲ್ 2025, 9:48 IST
ಅನುರಾಗ್‌ ಠಾಕೂರ್‌
ಅನುರಾಗ್‌ ಠಾಕೂರ್‌   

ಶ್ರೀನಗರ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೂತ್ರದ ಅನುಷ್ಠಾನವು ದೇಶಕ್ಕೆ ಗೆಲುವಿನ ಸನ್ನಿವೇಶವಾಗಿದೆ. ಏಕೆಂದರೆ, ಇದು ವಿವಿಧ ಚುನಾವಣೆಗಳನ್ನು ನಡೆಸುವಲ್ಲಿನ ವೆಚ್ಚವನ್ನು ಕಡಿತಗೊಳಿಸುವುದಲ್ಲದೆ, ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ವರ್ಷ ಲೋಕಸಭಾ ಚುನಾವಣೆ ನಡೆದ ಕೆಲವೇ ತಿಂಗಳುಗಳಲ್ಲಿ ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಿತು. ನಂತರ ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ದೆಹಲಿಯಲ್ಲಿ ಚುನಾವಣೆಗಳು ನಡೆದವು. ಒಂದು ವರ್ಷದಲ್ಲಿ ಕನಿಷ್ಠ ಐದು ವಿಧಾನಸಭಾ ಚುನಾವಣೆಗಳು ನಡೆದಿವೆ. ಎಲ್ಲಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಿದರೆ, ಅದು ವೆಚ್ಚವನ್ನು ಕಡಿಮೆ ಮಾಡುತ್ತದೆ, ಸಮಯವನ್ನು ಉಳಿಸುತ್ತದೆ. ಜೊತೆಗೆ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತದೆ’ ಎಂದು ಠಾಕೂರ್‌ ತಿಳಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿಗೆ ಜಾರಿಗೆ ಬಂದಾಗ, ಅದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಚುನಾವಣೆಗಳ ಮೊದಲು ಮತ್ತು ನಂತರ ಸಾಕಷ್ಟು ಸಮಯ ಕಳೆದು ಹೋಗುತ್ತದೆ. ಸರ್ಕಾರ ರಚಿಸಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದಲೇ ನಾವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾಗಬೇಕೆಂದು ಹೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ADVERTISEMENT

2029ರಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ತಂದರೆ, ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಲೋಕಸಭಾ ಮತ್ತು ರಾಜ್ಯ ಚುನಾವಣೆಗಳನ್ನು ಒಟ್ಟಿಗೆ ನಡೆಸಿದರೆ, ದೇಶಕ್ಕೆ ಲಾಭವಾಗುತ್ತದೆ ಎಂದು ಠಾಕೂರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.