ADVERTISEMENT

ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ: ವಿಶೇಷ ಕಾಯ್ದೆ ಜಾರಿಗೆ ಆಂಧ್ರ ಸಿದ್ಧತೆ

ಹೊಸ ಕಾನೂನು ಜಾರಿಗೆ ಆಂಧ್ರ ಸಚಿವ ಸಂಪುಟ ಒಪ್ಪಿಗೆ 

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 10:13 IST
Last Updated 12 ಡಿಸೆಂಬರ್ 2019, 10:13 IST
ಜಗನ್‌ ಮೋಹನ್‌ರೆಡ್ಡಿ
ಜಗನ್‌ ಮೋಹನ್‌ರೆಡ್ಡಿ   

ಅಮರಾವತಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು 21 ದಿನಗಳ ಒಳಗಾಗಿಕಡ್ಡಾಯವಾಗಿ ವಿಲೇವಾರಿ ಮಾಡಲು ಹಾಗೂ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕರಡು ಮಸೂದೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕೂಡಲೇ ವಿಚಾರಣೆ ನಡೆಸಲು ಹಾಗೂ ಕೂಡಲೇ ಆರೋಪಿಗೆ ಶಿಕ್ಷೆ ವಿಧಿಸಲು ‘ಎಪಿ ದಿಶಾ ಆಕ್ಟ್‌’ ಎಂಬ ಹೊಸ ಕಾಯ್ದೆ, ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ‘ಎಪಿ ವಿಶೇಷ ನ್ಯಾಯಾಲಯ 2019’ ಎಂಬ ಮತ್ತೊಂದು ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆನಡೆಸಿದೆ.

‘ಎಪಿ ದಿಶಾ ಆಕ್ಟ್‌’ನ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರು ದಾಖಲಾದ ಏಳು ದಿನಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ಒಟ್ಟು 21 ದಿನಗಳ ಒಳಗೆ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಈ ಕರಡಿನ ಮುಖ್ಯಾಂಶವಾಗಿದೆ.

ADVERTISEMENT

ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ದೌರ್ಜನ್ಯ ಪ್ರಕರಣಗಳ ಕುರಿತು ನಾಲ್ಕು ತಿಂಗಳಲ್ಲಿ ವಿಚಾರಣೆ ಅನುಮತಿ ನೀಡಲಾಗಿತ್ತು. ಈ ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ.


‘ಎಪಿ ವಿಶೇಷ ನ್ಯಾಯಾಲಯ 2019’ ಕರಡು

ಮಹಿಳೆಯರು ಮತ್ತು ಮಕ್ಕಳ ಮೇಲಿನ ನಿರ್ದಿಷ್ಟ ಅಪರಾಧಗಳಿಗಾಗಿ ‘ಎಪಿ ವಿಶೇಷ ನ್ಯಾಯಾಲಯ 2019’ರ ಹೊಸ ಕರಡನ್ನು ಸಿದ್ಧಪಡಿಸಿದೆ. ಈ ಕಾಯ್ದೆಯಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ, ಆಸಿಡ್‌ ದಾಳಿಯಂತಹ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸಲು ಆಂಧ್ರ ಪ್ರದೇಶದ13 ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇತ್ತೀಚಿಗೆ ನೆರೆ ರಾಜ್ಯ ತೆಲಂಗಾಣದಲ್ಲಿ 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ದೇಹವನ್ನು ಸುಟ್ಟುಹಾಕಲಾಗಿತ್ತು. ಘಟನೆ ಬಗ್ಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದರು. ಹೈದರಾಬಾದ್‌ ಎನ್‌ಕೌಂಟರ್‌ ಪ್ರಕರಣ ಸಂಬಂಧ ಪೊಲೀಸರಕ್ರಮಕ್ಕೆ ಜಗನ್‌ ಬೆಂಬಲ ವ್ಯಕ್ತಪಡಿಸಿದ್ದರು.


‘ಶಿಕ್ಷೆ ಪ್ರಮಾಣ ಹೆಚ್ಚಳ’

ಸದ್ಯ ಜಾರಿಯಲ್ಲಿರುವ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮಸೂದೆ–2019'ರ ಪ್ರಕಾರ, ಅಪರಾಧಿಗೆ 3ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಈ ಕಾಯ್ದೆಗೆ ತಿದ್ದುಪಡಿ ತರಲು ಮೂಲಕ ಆರೋಪಿಗಳ ಜೈಲು ಶಿಕ್ಷೆ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಮಹಿಳೆಯರಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಗಳು ಪ್ರಮುಖ ಪಾತ್ರವಹಿಸುತ್ತವೆಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.