ADVERTISEMENT

ಆಂಧ್ರಪ್ರದೇಶ ಅತ್ಯಾಚಾರ, ಹತ್ಯೆ: ಮರಣ ದಂಡನೆಗೆ ಗುರಿಯಾಗಿದ್ದ ವ್ಯಕ್ತಿ ಖುಲಾಸೆ

ಪಿಟಿಐ
Published 29 ಜನವರಿ 2025, 15:23 IST
Last Updated 29 ಜನವರಿ 2025, 15:23 IST
supreme-court-
supreme-court-   

ನವದೆಹಲಿ: 23 ವರ್ಷ ವಯಸ್ಸಿನ ಸಾಫ್ಟ್‌ವೇರ್‌ ಎಂಜಿನಿಯರ್ ಒಬ್ಬಳ ಹತ್ಯೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಚಂದ್ರಭಾನ್ ಸುದಾಮ್ ಸನಪ್ ಎನ್ನುವವರನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿ ಬಹಳ ಲೋಪಗಳು ಇವೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠ ಹೇಳಿದೆ.

ಆಂಧ್ರಪ್ರದೇಶದ ಮಚಿಲಿಪಟ್ಟಣಂನ ಯುವತಿಯು ಪಾಲಕರ ಜೊತೆ ಕ್ರಿಸ್ಮಸ್ ರಜೆ ಕಳೆದು 2014ರ ಜನವರಿ 5ರಂದು ಮುಂಬೈಗೆ ಮರಳಿದ್ದರು. ಆಕೆಯ ದೂರವಾಣಿಗೆ ಮತ್ತೆ ಮತ್ತೆ ಕರೆ ಮಾಡಿದಾಗಲೂ ಸಂಪರ್ಕಕ್ಕೆ ಸಿಗದಿದ್ದರಿಂದ ಆಕೆಯ ತಂದೆಯು ದೂರು ನೀಡಿದ್ದರು.

ADVERTISEMENT

10 ದಿನಗಳ ಶೋಧದ ನಂತರ ಆಕೆಯ ಮೃತದೇಹವು ಸುಟ್ಟ ಹಾಗೂ ಕೊಳೆತ ಸ್ಥಿತಿಯಲ್ಲಿ ಕಂಜುಮಾರ್ಗ್‌ ಪ್ರದೇಶದಲ್ಲಿ ಪೊದೆಗಳ ನಡುವೆ ಸಿಕ್ಕಿತ್ತು. ಸನಪ್ ಅವರನ್ನು ಬಂಧಿಸಿದ ಮುಂಬೈ ಪೊಲೀಸರು, ಅತ್ಯಾಚಾರ ಹಾಗೂ ಕೊಲೆ ಆರೋಪ ಹೊರಿಸಿದ್ದರು. ವಿಚಾರಣೆಯ ನಂತರ ಸನಪ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ಸನಪ್ ಅಪರಾಧಿ ಎಂಬುದನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌, ಸಂದರ್ಭಗಳನ್ನು ಒಗ್ಗೂಡಿಸಿ ಅವಲೋಕಿಸಿದಾಗ ಈತ ಅಪರಾಧಿ ಎಂಬುದು ಸಾಬೀತಾಗುವುದಿಲ್ಲ ಎಂದು ಹೇಳಿದೆ.

ಈ ಪ್ರಕರಣದಲ್ಲಿ ಕಣ್ಣಿಗೆ ಗೋಚರಿಸುತ್ತಿರುವುದಕ್ಕಿಂತ ಹೆಚ್ಚಿನ ಸಂಗತಿಗಳು ಇವೆ ಎಂದು ಪೀಠ ಹೇಳಿದೆ. ಪ್ರಾಸಿಕ್ಯೂಷನ್ ತನ್ನ ಆರೋಪವನ್ನು ಸಕಾರಣದ ಅನುಮಾನದ ಆಚೆಗೆ ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

ವಿಚಾರಣಾ ನ್ಯಾಯಾಲಯವು ಸನಪ್ ಅವರಿಗೆ 2015ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ 2018ರಲ್ಲಿ ಎತ್ತಿಹಿಡಿದಿತ್ತು.

ಸನಪ್ ಅವರು ಯುವತಿಯನ್ನು ಹಾಸ್ಟೆಲ್‌ಗೆ ಕರೆದೊಯ್ಯುವುದಾಗಿ ನಂಬಿಸಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.  ಆರೋಪಗಳನ್ನು ಸನಪ್ ಅಲ್ಲಗಳೆದಿದ್ದರು.

ದೇವರಿಗೆ ಬಿಟ್ಟಿದ್ದೇನೆ: ಯುವತಿಯ ತಂದೆ

ಮಚಿಲಿಪಟ್ಟಣಂ: ಆರೋಪಿಯನ್ನು ಖುಲಾಸೆಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿಯ ತಂದೆ ‘ನಾನು ಇದನ್ನು ದೇವರ ಮರ್ಜಿಗೆ ಬಿಟ್ಟಿದ್ದೇನೆ’ ಎಂದು ಹೇಳಿದ್ದಾರೆ. ‘ನಾವು ಏನು ಮಾಡುವುದು? ಏನಾಗುತ್ತಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ಸನಪ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ನಮಗೆ ಗೊತ್ತಿಲ್ಲ... ನಾನು ದೇವರಿಗೆ ಬಿಟ್ಟಿದ್ದೇನೆ ನನಗೆ ನನ್ನ ಮಗಳು ವಾಪಸ್ ಸಿಗುವುದಿಲ್ಲ’ ಎಂದು ಯುವತಿಯ ತಂದೆ ಹೇಳಿದ್ದಾರೆ.

ಮುಂಬೈ ಪೊಲೀಸರನ್ನು ಶ್ಲಾಘಿಸಿದ ಅವರು ‘ಅವರು ಬಹಳಷ್ಟು ಮುತುವರ್ಜಿ ವಹಿಸಿದ್ದರು. ಮಗಳ ಐ.ಡಿ. ಕಾರ್ಡ್ ಮತ್ತು ಇತರ ಕೆಲವು ವಸ್ತುಗಳನ್ನು ಆರೋಪಿಯ ಮನೆಯಲ್ಲಿ ಪತ್ತೆ ಮಾಡಿದ್ದರು’ ಎಂದಿದ್ದಾರೆ. ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಆದರೆ ಪೊಲೀಸರು ಸಾಕಷ್ಟು ಸಾಂದರ್ಭಿಕ ಸಾಕ್ಷ್ಯಗಳನ್ನು ಒಗ್ಗೂಡಿಸಿದ್ದರು. ಈ ಪ್ರಕರಣದಲ್ಲಿ ಮತ್ತೆ ಹೋರಾಟ ನಡೆಸುವ ಆಸಕ್ತಿ ಇಲ್ಲ ಕೊನೆಯ ದಿನಗಳನ್ನು ಶಾಂತಿಯಿಂದ ಕಳೆಯಬೇಕಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.