
ಶ್ರೀನಗರ: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದ ಸೂತ್ರಧಾರ ಡಾ.ಉಮರ್ ಉನ್ ನಬಿ ಆ ಯುವಕನನ್ನು ಎರಡನೇ ‘ಆತ್ಮಾಹುತಿ ಬಾಂಬರ್’ ಆಗಿ ನೇಮಕ ಮಾಡಿಕೊಳ್ಳಲು ಯತ್ನಿಸಿದ್ದ. ಯುವಕನೂ ಒಲವು ವ್ಯಕ್ತಪಡಿಸಿದ್ದ. ಕಣಿವೆಯಲ್ಲಿ ಆಗ ಆರಂಭವಾಗಿದ್ದ ಸೇಬು ಹಣ್ಣುಗಳ ಕೊಯ್ಲು ಸುಗ್ಗಿ ಹಾಗೂ ಮನೆ ದುರಸ್ತಿ ಕಾರಣ ನೀಡಿದ ಯುವಕ, ಡಾ.ಉಮರ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದ.
ಡಾ.ಉಮರ್ ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಆ ಯುವಕ ಎರಡನೇ ‘ಆತ್ಮಾಹುತಿ ಬಾಂಬರ್’ ಆಗಿರುತ್ತಿದ್ದ!
ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡ ಪ್ರಕರಣ ಕುರಿತು ತನಿಖೆ ಕೈಗೊಂಡಿರುವ ಶ್ರೀನಗರ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು, ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ ದರ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ.
ಈ ವಿದ್ಯಮಾನವು ಒಂದೆಡೆ, ಕಾಶ್ಮೀರ ಕಣಿವೆಯಲ್ಲಿ ಯುವಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಭಯೋತ್ಪಾದಕ ಸಂಘಟನೆಗಳು ಹುಡುಕಿಕೊಂಡಿರುವ ಹೊಸ ಮಾರ್ಗವನ್ನು ತೋರಿಸಿದರೆ, ಮತ್ತೊಂದೆಡೆ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಕ್ಕಿಂತ ಬದುಕು ಕಟ್ಟಿಕೊಳ್ಳಲು ಕೆಲ ಯುವಕರು ಮುಖ ಮಾಡುತ್ತಿರುವುದನ್ನು ವಿವರಿಸುತ್ತದೆ.
ಕಳೆದ ನವೆಂಬರ್ 10ರಂದು ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡಿತ್ತು. ಕಾರು ಚಲಾಯಿಸುತ್ತಿದ್ದ ಡಾ.ಉಮರ್ ನಬಿ ಹಾಗೂ ಇತರ 12 ಮಂದಿ ಮೃತಪಟ್ಟಿದ್ದರು.
‘ಡಾ.ಉಮರ್ ನಬಿ, ಭಯೋತ್ಪಾದಕ ಕೃತ್ಯ ನಡೆಸುವುದಕ್ಕಾಗಿ ಯಾಸಿರ್ ಅಹ್ಮದ್‌ನನ್ನು ಎರಡನೇ ಆತ್ಮಾಹುತಿ ಬಾಂಬರ್‌ನನ್ನಾಗಿ ನೇಮಕ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ, ಸೇಬು ಹಣ್ಣುಗಳ ಕೊಯ್ಲು ಆರಂಭವಾಗಿದ್ದರಿಂದ ಉಮರ್ ಯೋಜನೆ ಕೈಗೂಡಲಿಲ್ಲ’ ಎಂದು ಎನ್‌ಐಎ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
‘ಯಾಸಿರ್ ದರ್ 2023ರಿಂದಲೂ ಉಮರ್ ಜೊತೆ ಸಂಪರ್ಕ ಹೊಂದಿದ್ದ. ಉಮರ್ ಸ್ವತಃ ವೈದ್ಯನೂ ಆಗಿದ್ದ ಕಾರಣ ಯಾಸಿರ್ ಮೇಲೆ ಪ್ರಭಾವ ಬೀರಲು, ಆತನನ್ನು ಮೂಲಭೂತವಾದಿಯನ್ನಾಗಿ ಮಾಡುವುದು ಕಷ್ಟವೆನಿಸಲಿಲ್ಲ’ ಎಂದು ಹೇಳಿದ್ದಾರೆ.
‘ಉಮರ್ ನಬಿ ಭಯೋತ್ಪಾದಕ ಮಾತ್ರವಲ್ಲ, ಯುವಕರನ್ನು ಸುಲಭವಾಗಿ ಮನವೊಲಿಸಿ ಅವರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳಬಲ್ಲ ಚತುರನೂ ಆಗಿದ್ದ. ಆತ್ಮಾಹುತಿ ಬಾಂಬರ್ ಆಗಿ ಕೆಲಸ ಮಾಡುವುದಕ್ಕೆ ಯುವಕರನ್ನು ನೇಮಕ ಮಾಡಿಕೊಳ್ಳಲು ವಿವಿಧ ಹಂತದ ಘಟಕಗಳನ್ನು ಸ್ಥಾಪಿಸಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿಧ್ವಂಸಕ ಕೃತ್ಯ ಎಸಗಲು ಉಗ್ರ ಸಂಘಟನೆಯ ಘಟಕವು ಸಕ್ರಿಯವಾಗಿರುವುದನ್ನು ಶ್ರೀನಗರ ಪೊಲೀಸರು ಕಳೆದ ವರ್ಷ ಪತ್ತೆ ಮಾಡಿ, ತನಿಖೆ ಕೈಗೊಂಡ ಬಳಿಕ ಜಸಿಯರ್ ಅಲಿಯಾಸ್ ಡ್ಯಾನಿಶ್ ಎಂಬಾತನನ್ನು ಕಾಜಿಗುಂಡದಲ್ಲಿ ಬಂಧಿಸಿದ್ದರು.
‘ಜಸಿಯರ್‌ನನ್ನು ಕೂಡ ಉಮರ್ ನೇಮಕ ಮಾಡಿಕೊಂಡಿದ್ದ. ಜೈಷ್–ಎ–ಮೊಹಮ್ಮದ್ ಸಂಘಟನೆಗೆ ಸ್ಥಳೀಯವಾಗಿ ನೆರವಾಗುವಂತೆ ಆತನಿಗೆ ಸೂಚಿಸಿದ್ದನಲ್ಲದೇ, ಆತ್ಮಾಹುತಿ ಬಾಂಬರ್ ಆಗುವಂತೆಯೂ ಮನವೊಲಿಸಿದ್ದ. ತನ್ನ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಹಾಗೂ ಆತ್ಮಹತ್ಯೆ ಇಸ್ಲಾಮ್‌ನಲ್ಲಿ ನಿಷಿದ್ಧ ಎಂಬ ಕಾರಣ ನೀಡಿದ್ದ ಜಸಿಯರ್ ಆತ್ಮಾಹುತಿ ಬಾಂಬರ್ ಆಗುವುದಕ್ಕೆ ಒಪ್ಪಿರಲಿಲ್ಲ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಪ್ರಮುಖ ಅಂಶಗಳು
* ಉಗ್ರ ಸಂಘಟನೆ ಘಟಕವು ‘ಆತ್ಮಾಹುತಿ ಬಾಂಬರ್’ ಯೋಜನೆ ಕಾರ್ಯಗತಗೊಳಿಸಲು ಸಂಚು ರೂಪಿಸಿದ್ದನ್ನು ಹಿರಿಯ ಎಸ್‌ಪಿ ಡಾ.ಜಿ.ವಿ.ಸಂದೀಪ್ ಚಕ್ರವರ್ತಿ ಭೇದಿಸಿದ್ದರು
* ವಿವಿಧ ರಾಜ್ಯಗಳಲ್ಲಿನ ಉಗ್ರ ಜಾಲ ಹಾಗೂ ಜೈಷ್–ಎ–ಮೊಹಮ್ಮದ್ ಸಂಘಟನೆ ನಡುವಿನ ನಂಟನ್ನು ತನಿಖೆ ಬಹಿರಂಗಪಡಿಸಿತ್ತು
* ಟೆಲಿಗ್ರಾಮ್ ಆ್ಯಪ್ ಮೂಲಕ ಡಾ.ಉಮರ್ ಜೊತೆ ಯಾಸಿರ್ ಸಂಪರ್ಕದಲ್ಲಿದ್ದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.