ADVERTISEMENT

ವಿಪಕ್ಷ ನಾಯಕರ ಐಫೋನ್‌ ಹ್ಯಾಕ್ ವಿವಾದ: ಆ್ಯಪಲ್‌ಗೆ ಸ್ಪಷ್ಟ ಉತ್ತರ ಕೇಳಿದ ಕೇಂದ್ರ

ಪಿಟಿಐ
Published 19 ಫೆಬ್ರುವರಿ 2024, 15:36 IST
Last Updated 19 ಫೆಬ್ರುವರಿ 2024, 15:36 IST
<div class="paragraphs"><p>ರಾಜೀವ್‌ ಚಂದ್ರಶೇಖರ್‌ </p></div>

ರಾಜೀವ್‌ ಚಂದ್ರಶೇಖರ್‌

   

–ಪಿಟಿಐ ಚಿತ್ರ

ನವದೆಹಲಿ: ‘ವಿರೋಧ ಪಕ್ಷದ ನಾಯಕರ ಐಫೋನ್‌ ಹ್ಯಾಕ್‌ ವಿವಾದಕ್ಕೆ ಸಂಬಂಧಿಸಿದಂತೆ ಆ್ಯಪಲ್‌ ಕಂಪನಿಯಿಂದ ಸ್ಪಷ್ಟ ಉತ್ತರಕ್ಕಾಗಿ ಸರ್ಕಾರ ಕಾಯುತ್ತಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ADVERTISEMENT

ಐದು ತಿಂಗಳ ಹಿಂದೆ ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ಐಫೋನ್‌ ಹ್ಯಾಕ್‌ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ನಾಯಕರ ಫೋನ್‌ ಹಾಗೂ ಇ–ಮೇಲ್‌ಗಳಿಗೆ ಕಂಪನಿಯು ಎಚ್ಚರಿಕೆಯ ಸಂದೇಶ ಕಳುಹಿಸಿತ್ತು.

‘ವಿಪಕ್ಷ ನಾಯಕರ ಸಾಧನಗಳು ಸುರಕ್ಷಿತವಾಗಿವೆಯೇ ಹಾಗೂ ಒಂದು ವೇಳೆ ಸುರಕ್ಷಿತವಾಗಿದ್ದರೆ ಎಚ್ಚರಿಕೆಯ ಸಂದೇಶ ಕಳುಹಿಸಲು ನೈಜ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಆ್ಯಪಲ್‌ಗೆ ಕೇಳಲಾಗಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಚಿವರು ಹೇಳಿದ್ದಾರೆ. 

ಯಾವುದೇ ಕಂಪನಿಯು ತನ್ನ ದೌರ್ಬಲ್ಯದ ಬಗ್ಗೆ ಒಪ್ಪಿಕೊಳ್ಳುವುದಿಲ್ಲ. ಅದನ್ನು ಸ್ಪಷ್ಟವಾಗಿ ನಿರಾಕರಿಸುವ ಪ್ರವೃತ್ತಿ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಆರೋಪ ಕೇಳಿಬಂದ ದಿನದಂದೇ ಆ್ಯಪಲ್‌ ಕಂಪನಿಯೇ ಇದಕ್ಕೆ ಉತ್ತರ ನೀಡಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಆ್ಯಪಲ್‌ ಆಪರೇಟಿಂಗ್‌ ಸಿಸ್ಟಂ ಬಗ್ಗೆ ಪರಿಶೀಲಿಸಲು ಸರ್ಕಾರವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿಲ್ಲ. ತನ್ನ ಒಡೆತನದ ತಂತ್ರಜ್ಞಾನದ ಬಗ್ಗೆ ಕಂಪನಿ ಕೂಡ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್‌ ಸೇರಿದಂತೆ ಹಲವು ನಾಯಕರು, ತಮ್ಮ ಐಫೋನ್‌ ಹ್ಯಾಕ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು, ಚರ್ಚೆಗೆ ಗ್ರಾಸವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.