ADVERTISEMENT

ಏಪ್ರಿಲ್‌ 11ರಿಂದ ನಾಲ್ಕು ದಿನ ಕೋವಿಡ್‌ 'ಲಸಿಕೆ ಉತ್ಸವ': ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:18 IST
Last Updated 8 ಏಪ್ರಿಲ್ 2021, 16:18 IST
ಪ್ರಧಾನಿ ನರೇಂದ್ರ ಮೋದಿ–ಸಾಂದರ್ಭಿಕ ಚಿತ್ರ
ಪ್ರಧಾನಿ ನರೇಂದ್ರ ಮೋದಿ–ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಲಸಿಕೆ ಅಭಿಯಾನದ ಭಾಗವಾಗಿ ಏಪ್ರಿಲ್‌ 11ರಿಂದ 14ರ ವರೆಗೂ 'ಲಸಿಕೆ ಉತ್ಸವ' ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.

ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ನಾವು ಲಸಿಕೆಯ ಕಡೆಗೆ ಸಾಗುತ್ತ ಕೋವಿಡ್‌–19 ಪರೀಕ್ಷೆಯನ್ನು ಮರೆತಿರುವುದು ಇಂದಿನ ಸಮಸ್ಯೆಯಾಗಿದೆ. ಲಸಿಕೆ ಇಲ್ಲದೆಯೇ ನಾವು ಕೋವಿಡ್‌–19 ಎದುರಿನ ಹೋರಾಟದಲ್ಲಿ ಗೆಲುವು ಸಾಧಿಸಿದೆವು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ. ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ' ಎಂದರು.

ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಜಯಂತಿಯ ದಿನವಾದ ಏಪ್ರಿಲ್‌ 11 ಮತ್ತು ಏಪ್ರಿಲ್‌ 14ರ ನಡುವೆ ಲಸಿಕೆ ಉತ್ಸವ ನಡೆಸುವಂತೆ ಪ್ರಧಾನಿ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವವರ ಪೈಕಿ ಸಾಧ್ಯವಾದಷ್ಟು ಜನರನ್ನು ಲಸಿಕೆ ಉತ್ಸವದಲ್ಲಿ ಭಾಗಿಯಾಗುವಂತೆ ಮಾಡೋಣ ಎಂದು ರಾಜ್ಯಗಳಿಗೆ ತಿಳಿಸಿದ್ದಾರೆ.

ADVERTISEMENT

ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಪ್ರದೇಶಗಳಲ್ಲಿ 'ಕೊರೊನಾ ಕರ್ಫ್ಯೂ' ಎಂಬ ಪದವನ್ನು ಬಳಸುವಂತೆ ಪ್ರಧಾನಿ ಆಗ್ರಹಿಸಿದ್ದಾರೆ. ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 9 ಅಥವಾ 10 ಗಂಟೆಯಿಂದ ಬೆಳಿಗ್ಗೆ 5 ಅಥವಾ 6 ಗಂಟೆಯ ವರೆಗೂ ನಿಗದಿ ಮಾಡುವುದು ಉತ್ತಮ ಎಂದಿದ್ದಾರೆ.

ದೇಶದಲ್ಲಿ ಕೋವಿಡ್‌ ಪಾಸಿಟಿವ್ ಪ್ರಕರಣಗಳ ಪ್ರಮಾಣವನ್ನು ಶೇ 5ಕ್ಕೆ ಇಳಿಸುವ ಗುರಿಯನ್ನು ಪ್ರಧಾನಿ ಮೋದಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. 'ಶೇ 70ರಷ್ಟು ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಿರಬೇಕು. ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾದರೂ ಸರಿಯೇ, ನಾವು ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಸರಿಯಾದ ರೀತಿಯಲ್ಲಿ ಮಾದರಿಗಳನ್ನು ಸಂಗ್ರಹಿಸುವುದು ಬಹು ಮುಖ್ಯವಾದುದು, ಸೂಕ್ತ ಆಡಳಿತ ವ್ಯವಸ್ಥೆಯ ಮೂಲಕ ಅದನ್ನು ಪರಿಶೀಲಿಸಬಹುದು' ಎಂದು ಹೇಳಿದರು.

ಮಾಸ್ಕ್‌ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಇನ್ನಷ್ಟು ಹೆಚ್ಚು ಮಾಡಬೇಕಿದೆ, ಕೋವಿಡ್‌–19 ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದರು. ಇದರೊಂದಿಗೆ ಮೈಕ್ರೋ ಕಂಟೇನ್ಮೆಂಟ್‌ ವಲಯಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು.

ದೇಶದಲ್ಲಿ ಗುರುವಾರ 1.26 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.