ನವದೆಹಲಿ: ದೆಹಲಿಯಿಂದ ಗುಜರಾತ್‌ವರೆಗೆ ಸುಮಾರು 700 ಕಿ.ಮೀ ಉದ್ದ ಹರಡಿಕೊಂಡಿರುವ ಅರಾವಳಿ ಪರ್ವತ ಶ್ರೇಣಿಯ ಮರು ಅರಣ್ಯೀಕರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನವಾದ ಗುರುವಾರ ಚಾಲನೆ ನೀಡಿದರು.
‘ಭೂಮಿಯ ಅತ್ಯಂತ ಹಳೆಯ ಪರ್ವತಶ್ರೇಣಿಗಳಲ್ಲಿ ಒಂದಾಗಿರುವ ಅರಾವಳಿಯು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಹರಡಿಕೊಂಡಿದೆ. ಈ ಭಾಗವು ಹಲವು ವರ್ಷಗಳಿಂದ ನಾನಾ ಬಗೆಯ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಪರ್ವತ ಶ್ರೇಣಿಯ ಜತೆಗೆ ಹೊಂದಿಕೊಂಡಿರುವ ಪ್ರದೇಶವನ್ನು ಪುನಶ್ಚೇತನಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದೇವೆ. ಸ್ಥಳಿಯ ಆಡಳಿತದ ಜತೆಗೂಡಿ ಜಲ ವ್ಯವಸ್ಥೆ ಸುಧಾರಿಸುವ, ದೂಳಿನ ಬಿರುಗಾಳಿಯನ್ನು ಕಡಿಮೆಗೊಳಿಸುವ, ಪೂರ್ವ ಭಾಗದಲ್ಲಿ ಥಾರ್ ಮರುಭೂಮಿಯ ವಿಸ್ತರಣೆಯನ್ನು ತಡೆಯಯುವ ಹಲವು ಮಹತ್ವದ ಕ್ರಮಗಳನ್ನು ಈ ಯೋಜನೆ ಮೂಲಕ ಕೈಗೊಳ್ಳಲಿದ್ದೇವೆ. ದೇಶದ ಯುವ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಅವರು ಕರೆ ನೀಡಿದರು.
ಯೋಜನೆ ಪ್ರಮುಖಾಂಶ:
* ದೆಹಲಿ ಹರಿಯಾಣ ರಾಜಸ್ಥಾನ ಮತ್ತು ಗುಜರಾತಿನ 29 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅರಾವಳಿ ಪರ್ವತ ಶ್ರೇಣಿಯ ಸುತ್ತಲಿನ ಐದು ಕಿ.ಮೀ ಬಫರ್ ಪ್ರದೇಶದಲ್ಲಿ ಹಸಿರು ಹೊದಿಕೆಯ ವಿಸ್ತರಣೆ
* ಈ ರಾಜ್ಯಗಳಲ್ಲಿ ವಾಯು ಮಾಲಿನ್ಯ ತಗ್ಗಿಸಲು ನೆರವಾಗುವುದರ ಜತೆಗೆ ಸಾರ ಕಳೆದುಕೊಂಡಿರುವ 2.60 ಕೋಟಿ ಹೆಕ್ಟೇರ್ ಪ್ರದೇಶವನ್ನು 2030ರ ವೇಳೆಗೆ ಪುನಶ್ಚೇತನಗೊಳಿಸುವ ಗುರಿ
* ಅರಾವಳಿ ಪ್ರದೇಶದಲ್ಲಿ ಅರಣ್ಯೀಕರಣ ಜಲ ಮೂಲಗಳ ಪುನಶ್ಚೇತನದ ಮೂಲಕ ಜೀವವೈವಿಧ್ಯದ ಸಂರಕ್ಷಣೆ ಮತ್ತು ವೃದ್ಧಿಗೆ ಕ್ರಮ
* ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ ಸೃಷ್ಟಿಯ ಜತೆಗೆ ಅವರ ಆದಾಯ ಹೆಚ್ಚಿಸಲು ನೆರವು
* ಈ 29 ಜಿಲ್ಲೆಗಳಲ್ಲಿ ಸುಮಾರು 1000 ನರ್ಸರಿಗಳ ಅಭಿವೃದ್ಧಿಗೆ ಒತ್ತು
* ಥಾರ್ ಮರುಭೂಮಿಯ ವಿಸ್ತರಣೆ ತಡೆಯುವ ಮೂಲಕ ದಹೆಲಿ ಜೈಪುರ ಗುರುಗ್ರಾಮ ಸೇರಿದಂತೆ ಹಲವು ನಗರಗಳನ್ನು ಅಪಾಯದಿಂದ ತಪ್ಪಿಸುವ ಗುರಿ
ಅಪಾಯಕ್ಕೆ ಸಿಲುಕಿರುವ ಅರಾವಳಿ
ಚಂಬಲ್ ಸಬರಮತಿ ಮತ್ತು ಲುನಿಯಂಥ ಪ್ರಮುಖ ನದಿಗಳು ಅರಾವಳಿ ಪರ್ವತ ಶ್ರೇಣಿಯಲ್ಲಿ ಹರಿಯುತ್ತವೆ. ಅರಣ್ಯ ಪ್ರದೇಶ ಹುಲ್ಲುಗಾವಲು ಮತ್ತು ಜೌಗು ಪ್ರದೇಶಗಳಿಂದ ಕೂಡಿರುವ ಈ ಶ್ರೇಣಿಯಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿ ಜೀವಸಂಕುಲ ಆಶ್ರಯ ಪಡೆದಿವೆ. ಅಲ್ಲದೆ ಅಳಿವಿನಂಚಿನಲ್ಲಿ ಇರುವ ಹಲವು ಪ್ರಭೇದದ ಸಸ್ಯ ಮತ್ತು ಪ್ರಾಣಿಗಳೂ ಇಲ್ಲಿ ನೆಲೆ ಕಂಡುಕೊಂಡಿವೆ. ಈ ಶ್ರೇಣಿಯಲ್ಲಿ ಅರಣ್ಯ ನಾಶ ಗಣಿಗಾರಿಕೆ ಜಾನುವಾರುಗಳ ಮೇಯಿಸುವಿಕೆ ಅರಣ್ಯ ಒತ್ತುವರಿ ನದಿಗಳ ಬತ್ತುವಿಕೆಯಿಂದ ಮರುಭೂಮಿ ಪ್ರದೇಶ ವಿಸ್ತರಿಸುತ್ತಿದೆ. ಇದರಿಂದ ಇಲ್ಲಿನ ವನ್ಯ ಜೀವಿ ಸಂಕುಲ ಅಪಾಯಕ್ಕೆ ಸಿಲುಕುತ್ತಿವೆ. ಸಾರ ಕಳೆದುಕೊಂಡಿರುವ ಈ ಭಾಗದ ಭೂ ಪ್ರದೇಶದ ಪೈಕಿ ರಾಜಸ್ಥಾನದಲ್ಲಿ ಶೇ 81 ಗುಜರಾತಿನಲ್ಲಿ ಶೇ 15.8 ಹರಿಯಾಣದಲ್ಲಿ ಶೇ 1.7 ಹಾಗೂ ದೆಹಲಿಯಲ್ಲಿ ಶೇ 1.6ರಷ್ಟು ಪಾಲನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.