ADVERTISEMENT

ನಿಮ್ಮ ಸರ್ಕಾರ ನನಗೆ ಕಿರುಕುಳ ನೀಡುತ್ತಿದ್ದರೂ ಸಂಕಟವಾಗುತ್ತಿಲ್ಲವೇ?: ಕಂಗನಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ ಬಾಲಿವುಡ್ ನಟಿ ಕಂಗನಾ ರನೌತ್

ಪಿಟಿಐ
Published 11 ಸೆಪ್ಟೆಂಬರ್ 2020, 19:49 IST
Last Updated 11 ಸೆಪ್ಟೆಂಬರ್ 2020, 19:49 IST
ಕಂಗನಾ ರನೌತ್
ಕಂಗನಾ ರನೌತ್   

ಮುಂಬೈ:‘ಶಿವಸೇನಾ ಈಗ ಸೋನಿಯಾ ಸೇನೆ‘ ಆಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಬಾಲಿವುಡ್‌ ನಟಿ ಕಂಗನಾ ರನೌತ್, ಈಗ ತಮ್ಮ ವಾಗ್ಬಾಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕಡೆಗೆ ತಿರುಗಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿರುವ ನಿಮ್ಮ ಸರ್ಕಾರ ನನಗೆ ಕಿರುಕುಳ ನೀಡುತ್ತಿದ್ದರೂ, ಈ ಬಗ್ಗೆ ನಿಮಗೆ ಸಂಕಟವಾಗುತ್ತಿಲ್ಲವೇ ?‘ ಎಂದು ಸೋನಿಯಾ ಅವರನ್ನು ಕಂಗನಾ ಪ್ರಶ್ನಿಸಿದ್ದಾರೆ.ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ.

‘ಗೌರವಾನ್ವಿತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರೇ,ಒಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಹಾರಾಷ್ಟ್ರ ಸರ್ಕಾರ ನನಗೆ ಕಿರುಕುಳ ನೀಡುತ್ತಿರುವುದು ನಿಮಗೆ ಸಂಕಟ ತರುತ್ತಿಲ್ಲವೇ? ಡಾ. ಅಂಬೇಡ್ಕರ್‌ ಅವರು ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆಆ ನಿಮ್ಮ ಸರ್ಕಾರಕ್ಕೆ ಮನವಿ ಮಾಡಲು ಸಾಧ್ಯವಿಲ್ಲವೇ?‘ ಎಂದು ಕಂಗನಾ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಹುಟ್ಟಿ, ಭಾರತದಲ್ಲಿ ಬದುಕುತ್ತಿರುವ ಸೋನಿಯಾ ಗಾಂಧಿ ಅವರು, ಇಲ್ಲಿ ಮಹಿಳೆಯರು ಹೇಗೆಲ್ಲ ಹೋರಾಡುತ್ತಿದ್ದಾರೆ ಎಂಬುದನ್ನು ಕಡ್ಡಾಯವಾಗಿ ಅರಿಯಬೇಕು‘ ಎಂಬ ಕಟುವಾದ ಪ್ರತಿಕ್ರಿಯೆಯ ಸಾಲುಗಳನ್ನು ಅವರು ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.

‘ತಮ್ಮದೇ ಸರ್ಕಾರ ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವಾಗ ಹಾಗೂ ಕಾನೂನು ಸುವ್ಯವಸ್ಥೆ ಅಣಕವಾಡುವ ಸ್ಥಿತಿ ತಲುಪಿದ್ದರೂ ನೀವು ಪ್ರದರ್ಶಿಸುತ್ತಿರುವ ಮೌನ ಮತ್ತು ಉದಾಸೀನತೆಯನ್ನು ಇತಿಹಾಸ ನಿರ್ಧರಿಸಲಿದೆ. ಈಗಲಾದರೂ ಈ ಸಮಸ್ಯೆ ಪರಿಹರಿಸಲು ನೀವು ಮಧ್ಯ ಪ್ರವೇಶಿಸಬಹುದು ಎಂದು ಭಾವಿಸಿದ್ದೇನೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.