ADVERTISEMENT

ದೆಹಲಿ: ದುರಂತೊ ಎಕ್ಸ್‌ಪ್ರೆಸ್‌ ದರೋಡೆ; ಸನ್‌ಗ್ಲಾಸ್‌ಗಳನ್ನೂ ಬಿಡದ ಕಳ್ಳರು

ಏಜೆನ್ಸೀಸ್
Published 17 ಜನವರಿ 2019, 11:35 IST
Last Updated 17 ಜನವರಿ 2019, 11:35 IST
   

ನವದೆಹಲಿ: ಜಮ್ಮು–ದೆಹಲಿ ದುರಂತೊ ಎಕ್ಸ್‌ಪ್ರೆಸ್‌ ರೈಲಿನ ಎರಡು ಎಸಿ ಬೋಗಿಗಳಿಗೆ ನುಗ್ಗಿರುವ ದರೋಡೆಕೋರರು, 10–15 ನಿಮಿಷಗಳಲ್ಲಿ ಹತ್ತಾರು ಪ್ರಯಾಣಿಕರ ಹಣ, ಒಡವೆ, ಎಟಿಎಂ ಕಾರ್ಡ್‌ಗಳು, ಮೊಬೈಲ್‌ ಹಾಗೂ ಸನ್‌ಗ್ಲಾಸ್‌ಗಳನ್ನೂ ದೋಚಿರುವ ಘಟನೆ ಗುರುವಾರ ನಡೆದಿದೆ.

ಬೆಳಗಿನ ಜಾವ 3:30ಕ್ಕೆ ದೆಹಲಿಯಲ್ಲಿ ನಿಂತ ರೈಲಿಗೆ ನುಗ್ಗಿದ ದರೋಡೆಕಾರರು, ಪ್ರಯಾಣಿಕರ ಕುತ್ತಿಗೆಗೆ ಚಾಕು ಹಿಡಿದು ಬೆಲೆ ಬಾಳುವ ವಸ್ತುಗಳು, ಹಣ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಕಿತ್ತುಕೊಂಡಿದ್ದಾರೆ. ದೆಹಲಿಯ ಕೇಂದ್ರ ನಿಲ್ದಾಣಕ್ಕೆ ತೆರಳುವುದಕ್ಕೂ ಮುನ್ನ ಸಿಗ್ನಲ್‌ಗಾಗಿ ಬಾದಲಿ ಪ್ರದೇಶದಲ್ಲಿ ರೈಲು ನಿಂತಿದೆ. ಇದೇ ಸಮಯದಲ್ಲಿ ದರೋಡೆ ನಡೆದಿದೆ.

’ರೈಲಿನ ಬಿ3 ಮತ್ತು ಬಿ ಬೋಗಿಗಳ ಒಳಗೆ 7 ರಿಂದ 10 ಮಂದಿ ಅನಾಮಿಕರು ನುಗ್ಗಿದ್ದಾರೆ. ಎಲ್ಲರೂ ಚೂಪಾದ ಚಾಕುಗಳನ್ನು ಹಿಡಿದಿದ್ದರು, ಪ್ರಯಾಣಿಕರ ಕುತ್ತಿಗೆ ಚಾಕು ಹಿಡಿದು ಅವರಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಒಪ್ಪಿಸುವಂತೆ ತಾಕೀತು ಮಾಡಿದ್ದಾರೆ. 10–15 ನಿಮಿಷಗಳು ದರೋಡೆ ನಡೆಯಿತು. ದರೋಡೆಕೋರರು ರೈಲಿನಿಂದ ಜಿಗಿದು ಓಡಿದರೂ ರೈಲ್ವೆಯ ಯಾವುದೇ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿ ಕಾಣಿಸಿಕೊಳ್ಳಲೇ ಇಲ್ಲ.’ ಎಂದು ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ.

ADVERTISEMENT

ಟಿಟಿ ಮತ್ತು ರೈಲಿನ ಸಿಬ್ಬಂದಿಗಾಗಿ ಹುಡುಕಾಡಿದ ಪ್ರಯಾಣಿಕರಿಗೆ 20 ನಿಮಿಷಗಳ ಅವರು ಪತ್ತೆಯಾಗಿದ್ದಾರೆ. ’ಈ ರೈಲಿನಲ್ಲಿ ಯಾರೊಬ್ಬ ಭದ್ರತಾ ಸಿಬ್ಬಂದಿಯೂ ಇಲ್ಲ ಎಂದು ರೈಲ್ವೆ ಸಹಾಯಕರಿಂದ ತಿಳಿದು ಬಂತು. ಎಸಿ ಬೋಗಿಯ ಪ್ರಯಾಣಿಕರಿಗೇ ಸುರಕ್ಷತೆ ಇಲ್ಲವೆಂದರೆ, ಇನ್ನೂ ಸ್ಲೀಪಿಂಗ್‌ ಕೋಚ್‌ ಹಾಗೂ ಜನರಲ್‌ ಕೋಚ್‌ನ ಪ್ರಯಾಣಿಕರ ಗತಿ ಏನು?’ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ರೈಲ್ವೆ ಭದ್ರತಾ ಪಡೆ ಈ ಪ್ರಕರಣದ ತನಿಖೆ ವಹಿಸಿದ್ದು, ದರೋಡೆಕೋರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಉತ್ತರ ರೈಲ್ವೆ ವಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.