ಉಪೇಂದ್ರ ದ್ವಿವೇದಿ
– ಪಿಟಿಐ ಚಿತ್ರ
ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಭೂತಾನ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಟೂ ತ್ಶೇರಿಂಗ್ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ಭೂತಾನ್ ನಡುವಿನ ರಕ್ಷಣಾ ಸಂಬಂಧವನ್ನು ವೃದ್ಧಿಸುವಲ್ಲಿ ಈ ಮಾತುಕತೆ ಸಹಕಾರಿಯಾಗಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪ್ರಾದೇಶಿಕ ಭದ್ರತೆ ಕುರಿತಂತೆ ಗಡಿ ರಾಷ್ಟ್ರಗಳಲ್ಲಿ ಆದ್ಯತೆ ಹೆಚ್ಚಾಗಿದ್ದು, ಭಾರತ ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ಆಪರೇಷನ್ ಸಿಂಧೂರ ನಡೆದ ಬೆನ್ನಲ್ಲೇ ದ್ವಿವೇದಿ ಅವರು ಭೂತಾನ್‌ಗೆ 4 ದಿನಗಳ ಪ್ರವಾಸ ಕೈಗೊಂಡಿರುವುದು ಮಹತ್ವ ಪಡೆದಿದೆ. ಉಭಯ ಅಧಿಕಾರಿಗಳು ಪರಸ್ಪರ ರಕ್ಷಣಾ ಸಹಕಾರ ವೃದ್ಧಿಸುವುದು ಮಾತ್ರವಲ್ಲದೇ, ಡೋಕ್ಲಾಂ ಪ್ರದೇಶದಲ್ಲಿ ಚೀನಾದ ಚಟುವಟಿಕೆ ಕುರಿತಂತೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸೇನಾ ಮುಖ್ಯಸ್ಥರೊಂದಿಗೆ ಮಾತ್ರವಲ್ಲದೇ, ಭೂತಾನ್‌ನ ಸೇನಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿರುವ ಭೂತಾನ್‌ನಲ್ಲಿರುವ ಭಾರತೀಯ ಸೇನಾ ತರಬೇತಿ ತಂಡದ (ಐಎಂಟಿಆರ್‌ಎಟಿ) ಹಿರಿಯ ಅಧಿಕಾರಿಗಳೊಂದಿಗೂ ದ್ವಿವೇದಿ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.