ADVERTISEMENT

ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ ಜ.ನರವಣೆ ಅಧಿಕಾರ ಸ್ವೀಕಾರ

ಪಿಟಿಐ
Published 16 ಡಿಸೆಂಬರ್ 2021, 2:09 IST
Last Updated 16 ಡಿಸೆಂಬರ್ 2021, 2:09 IST
ನರವಣೆ
ನರವಣೆ   

ನವದೆಹಲಿ: ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ (ಸಿಒಎಸ್‌ಸಿ) ಸೇನಾಪಡೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ನರವಣೆ ಅವರು ಐದು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.

ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರ ಜೊತೆಸೇನಾ ಪಡೆಗಳ ಮುಖ್ಯಸ್ಥರಾಗಿದ್ದ (ಸಿಡಿಎಸ್‌) ಜನರಲ್ ರಾವತ್ ಅವರು ಕೆಲವ ವಾರಗಳ ಹಿಂದೆ ಸಭೆ ನಡೆಸಿದ್ದರು. ಮೂರು ಪಡೆಗಳಲ್ಲಿ ಆಗಬೇಕಿರುವ ಸುಧಾರಣಾ ಕ್ರಮಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವುದಕ್ಕೆ ಇದ್ದ ಗಡುವನ್ನು 2022ರ ಸೆಪ್ಟೆಂಬರ್‌ನಿಂದ 2022ರ ಏಪ್ರಿಲ್‌ಗೆ ಇಳಿಸಿದ್ದರು.

ADVERTISEMENT

ಎರಡರಿಂದ ಮೂರು ವರ್ಷಗಳಲ್ಲಿ ಈ ಎಲ್ಲ ಪ್ರಕ್ರಿಯೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ರಕ್ಷಣಾ ಸಚಿವಾಲಯ ನಿರೀಕ್ಷೆ ಇಟ್ಟುಕೊಂಡಿದೆ. ಜನರಲ್ ರಾವತ್ ಅವರ ನಿಧನ ಸೇನಾಪಡೆಗಳಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಆದರೆ ಅವರ ಸ್ಥಾನಕ್ಕೆ ಬದಲಿ ಆಯ್ಕೆ ಮಾಡುವ ಮೂಲಕ, ರಾವತ್ ಅವರು ಪ್ರಸ್ತಾಪಿಸಿದ್ದ ಸೇನಾ ಸುಧಾರಣಾ ಪ್ರಕ್ರಿಯೆಯ ಕಾವು ಆರದಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಸೇನಾಪಡೆಗಳ ಮೂಲ ಸಂರಚನೆಯಲ್ಲಿ ಬದಲಾವಣೆ ಮಾಡುವ ಕುರಿತು ಇತ್ತೀಚೆಗೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ವಾಯುಪಡೆಯು ಸೇನಾಪಡೆಗೆ ವಾಯುಬಲ ತುಂಬುವ ಘಟಕವಾಗಿ ಕೆಲಸ ಮಾಡಲಿದೆ ಎಂದು ರಾವತ್ ಹೇಳಿದ್ದರು. ಇದಕ್ಕೆ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಏರ್‌ ಚೀಫ್ ಮಾರ್ಷಲ್ ಆರ್‌.ಕೆ.ಎಸ್. ಬಧೌರಿಯಾ, ವಾಯುಪಡೆ ಪಾತ್ರ ನಿರ್ಣಾಯಕ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.