ADVERTISEMENT

‘ಅಗ್ನಿಪಥ’ ಅಡಿಯಲ್ಲಿ ಅಲ್ಪಾವಧಿ ಕರ್ತವ್ಯಕ್ಕೆ ನೇಮಕಾತಿ: ಭೂಸೇನೆ ಅಧಿಸೂಚನೆ

ಪಿಟಿಐ
Published 20 ಜೂನ್ 2022, 18:49 IST
Last Updated 20 ಜೂನ್ 2022, 18:49 IST
   

ನವದೆಹಲಿ : ರಕ್ಷಣಾ ಪಡೆಗಳಲ್ಲಿ ಅಲ್ಪಾವಧಿ ಕರ್ತವ್ಯದ ನೇಮಕಾತಿ ಯೋಜನೆ ‘ಅಗ್ನಿಪಥ’ ಅಡಿಯಲ್ಲಿ ನೇಮಕಕ್ಕಾಗಿ ಭೂ ಸೇನೆಯು ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳ ಆನ್‌ಲೈನ್‌ ನೋಂದಣಿಯು ಜುಲೈಯಲ್ಲಿ ಆರಂಭವಾಗಲಿದೆ. ಆನ್‌ಲೈನ್‌ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ.

ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕಗೊಳ್ಳುವ ಅಗ್ನಿವೀರರಿಗೆ ಭೂಸೇನೆಯಲ್ಲಿ ಭಿನ್ನವಾದ ಶ್ರೇಣಿ ನೀಡಲಾಗುವುದು. ಈಗ ಇರುವ ಯಾವುದೇ ಶ್ರೇಣಿ ಅವರಿಗೆ ಅನ್ವಯ ಆಗುವುದಿಲ್ಲ.

ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ಸೇನೆಯಲ್ಲಿ ಇರುವವರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಯುದ್ಧದಲ್ಲಿ ಗಂಡನನ್ನು ಕಳೆದುಕೊಂಡ ವಿಧವೆಯರ ಮಕ್ಕಳು, ಮಾಜಿ ಸೈನಿಕರ ವಿಧವೆಯರ ಮಕ್ಕಳಿಗೆ ಈ ಪರೀಕ್ಷೆಯಲ್ಲಿ 20 ಕೃಪಾಂಕ ನೀಡಲಾಗುವುದು. ಹಾಗೆಯೇ ಎನ್‌ಸಿಸಿಯ ‘ಎ’ ಮತ್ತು ‘ಬಿ’ ಪ್ರಮಾಣಪತ್ರ ಹೊಂದಿರುವವರಿಗೂ ಕೃಪಾಂಕ ದೊರೆಯಲಿದೆ.

ADVERTISEMENT

ಅತ್ಯಂತ ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯೊಂದಿಗೆ ಸೇನೆಯನ್ನು ಅಗ್ನಿವೀರರು ಬಿಟ್ಟು ಹೋಗಲು ಅವಕಾಶ ಇದೆ.

ನಾಲ್ಕು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ತಮ್ಮನ್ನು ಸೇನೆಗೆ ಸೇರಿಸಿಕೊಳ್ಳಲೇಬೇಕು ಎಂಬ ಬೇಡಿಕೆ ಮುಂದಿರಿಸುವ ಹಕ್ಕು ಅಗ್ನಿವೀರರಿಗೆ ಇಲ್ಲ. 18 ವರ್ಷದೊಳಗಿನ ಅಭ್ಯರ್ಥಿಗಳ ಅರ್ಜಿಗೆ ಹೆತ್ತವರು ಅಥವಾ ಪೋಷಕರ ಸಹಿ ಕಡ್ಡಾಯ ಎಂದು ಅಧಿಸೂಚನೆ
ಯಲ್ಲಿ ಹೇಳಲಾಗಿದೆ.

ಕಿಸಾನ್‌ ಮೋರ್ಚಾ ಪ್ರತಿಭಟನೆ 24ರಂದು

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಭಾರಿ ಪ್ರತಿಭಟನೆ ಸಂಘಟಿಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾವು (ಎಸ್‌ಕೆಎಂ) ಅಗ್ನಿಪಥ ಯೋಜನೆಯ ವಿರುದ್ಧ ಇದೇ 24ರಂದು ಪ್ರತಿಭಟನೆ ನಡೆಸಲಿದೆ. ಶುಕ್ರವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಯುವಜನರು, ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಕೋರಲಾಗಿದೆ.

ಪ್ರತಿಭಟನೆಯು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಯಲಿದೆ.ಅಗ್ನಿಪಥ ಯೋಜನೆಯ ವಿರುದ್ಧ ಇದೇ 30ರಂದು ಪ್ರತಿಭಟನೆ ನಡೆಸಲು ಭಾರತೀಯ ಕಿಸಾನ್‌ ಯೂನಿಯನ್‌ ನಿರ್ಧರಿಸಿತ್ತು. ಆ ಪ್ರತಿಭಟನೆ ಕೂಡ 24ರಂದೇ ನಡೆಯಲಿದೆ.

600ಕ್ಕೂ ಹೆಚ್ಚು ರೈಲು ರದ್ದು

‘ಅಗ್ನಿಪಥ’ ವಿರುದ್ಧದ ಪ್ರತಿಭಟನೆ ಕಾರಣದಿಂದ 612 ರೈಲುಗಳ ಸಂಚಾರ
ವನ್ನು ರೈಲ್ವೆ ಇಲಾಖೆಯು ಸೋಮವಾರ ರದ್ದುಪಡಿಸಿದೆ. ಅದರಲ್ಲಿ 223 ಎಕ್ಸ್‌ಪ್ರೆಸ್‌ ರೈಲುಗಳು ಮತ್ತು 379 ಪ್ಯಾಸೆಂಜರ್‌ ರೈಲುಗಳು ಸೇರಿವೆ.

ನಾಲ್ಕು ಎಕ್ಸ್‌ಪ್ರೆಸ್‌ ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ಆರಂಭಗೊಂಡ ಬಳಿಕ ಅಂದರೆ, ಇದೇ 15ರಿಂದಲೇ ರೈಲು ಸಂಚಾರ ವ್ಯತ್ಯಯವಾಗಿದೆ.

ಕಳೆದ ನಾಲ್ಕು ದಿನಗಳಿಗೆ ಹೋಲಿಸಿದರೆ ಸೋಮವಾರ ಪ್ರತಿಭಟನೆಯ ಬಿರುಸು ಅಲ್ಪ ಕಡಿಮೆಯಾಗಿತ್ತು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.