ADVERTISEMENT

ಯಾವುದೇ ಸನ್ನಿವೇಶ ಎದುರಿಸಲು ಸೇನೆ ಸನ್ನದ್ಧ: ಏರ್ ಮಾರ್ಷಲ್ ಎ.ಕೆ. ಭಾರ್ತಿ

​ಪ್ರಜಾವಾಣಿ ವಾರ್ತೆ
ಪಿಟಿಐ
Published 12 ಮೇ 2025, 11:06 IST
Last Updated 12 ಮೇ 2025, 11:06 IST
   

ನವದೆಹಲಿ: ಕದನ ವಿರಾಮದ ಮಧ್ಯೆಯೂ ಭಾರತೀಯ ಸೇನೆಯು ಯುದ್ಧ ಸನ್ನದ್ಧ ಸ್ಥಿತಿಯಲ್ಲಿದೆ. ಯಾವುದೇ ಸಂದರ್ಭ ಎದುರಾದರೂ ಅದನ್ನು ಎದುರಿಸಲು ಸೇನೆ ಸರ್ವ ಸನ್ನದ್ಧವಾಗಿವೆ ಎಂದು ಭಾರತ ಸೋಮವಾರ ಹೇಳಿದೆ.

ಭಾರತದ ವಿರುದ್ಧ ವಾಯು ದಾಳಿ ಮಾಡುವ ಪಾಕಿಸ್ತಾನದ ಯತ್ನವನ್ನು ನಮ್ಮ ರಕ್ಷಣಾ ವ್ಯವಸ್ಥೆ ಸಮರ್ಥವಾಗಿ ನಿಭಾಯಿಸಿದೆ. ಅದರಲ್ಲೂ ಸ್ವದೇಶಿ ನಿರ್ಮಿತ 'ಆಕಾಶ್‌'ನಂತಹ ರಕ್ಷಣಾ ವ್ಯವಸ್ಥೆಗಳು ಅದ್ಭುತ ಯಶಸ್ಸು ತಂದುಕೊಟ್ಟಿವೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು.

ಭಾರತೀಯ ವಾಯುಪಡೆಯ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್, ಪಾಕಿಸ್ತಾನದ ಮಿಲಿಟರಿ ದಾಳಿಯನ್ನು ಸಮರ್ಥವಾಗಿ ಎದುರಿಸಿದೆ‌.

ADVERTISEMENT

ನಮ್ಮ ಹೋರಾಟವು ಕೇವಲ ಉಗ್ರರ ಹಾಗೂ ಉಗ್ರರ ನೆಲೆಗಳನ್ನು ನಾಶಗೊಳಿಸುವ ಉದ್ದೇಶ ಹೊಂದಿತ್ತು. ಆದರೆ, ಪಾಕಿಸ್ತಾನಿ ಸೇನೆಯು ಉಗ್ರರಿಗೆ ಸಹಾಯ ಹಸ್ತ ಚಾಚಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಯಿತು ಎಂದರು.

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ, ಅಂತರರಾಷ್ಟ್ರೀಯ ಗಡಿಯಲ್ಲಿ ಯಾವುದೇ ಸಂಘರ್ಷದ ವರದಿ ದಾಖಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ, ರಾತ್ರಿಯ ವೇಳೆ ಶಾಂತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಂದು ಬೆಳಿಗ್ಗೆ ಭಾರತೀಯ ಸೇನೆ ತಿಳಿಸಿತ್ತು.

ಪಹಲ್ಗಾಮ್ ಉಗ್ರದಾಳಿಗೆ ಪ್ರತಿಕಾರವಾಗಿ, ಭಾರತೀಯ ಸೇನೆಯು 9 ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಮೇ.7ರಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಇದಾದ ನಂತರ, ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶನಿವಾರವಷ್ಟೇ, ಎರಡು ದೇಶಗಳು ಕೂಡ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.