
ಭಡೆರ್ವಾಹ್/ಜಮ್ಮು: ಸೇನಾ ವಾಹನವು ರಸ್ತೆಯಿಂದ ಜಾರಿ ಕಣಿವೆಗೆ ಉರುಳಿದ ಪರಿಣಾಮ 10 ಮಂದಿ ಯೋಧರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಡೆರ್ವಾಹ್–ಚಂಬಾ ನಡುವಿನ ಅಂತರರಾಜ್ಯ ರಸ್ತೆಯ 9000 ಅಡಿ ಎತ್ತರದ ಖನ್ನಿ ಟಾಪ್ ಬಳಿ ಈ ಅವಘಡ ಸಂಭವಿಸಿದೆ.
ಬುಲೆಟ್ ಪ್ರೂಫ್ ಸೇನಾ ವಾಹನದಲ್ಲಿ 17 ಮಂದಿ ಪ್ರಯಾಣಿಸುತ್ತಿದ್ದರು. ಎತ್ತರಕ್ಕೆ ಹೋದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನವು ರಸ್ತೆಯಿಂದ ಜಾರಿ 200 ಅಡಿಯ ಪ್ರಪಾತಕ್ಕೆ ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೇನೆ ಮತ್ತು ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, 4 ಮಂದಿ ಸೇನಾಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟರೆ. ತೀವ್ರವಾಗಿ ಗಾಯಗೊಂಡಿದ್ದ 6 ಮಂದಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಉಧಮಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ದುರಾದೃಷ್ಟಕರ ಸೇನಾ ವಾಹನದ ಅಪಘಾತದಲ್ಲಿ ನಾವು 10 ಮಂದಿ ಯೋಧರನ್ನು ಕಳೆದುಕೊಂಡಿದ್ದೇವೆ. ಇನ್ನೂ 11 ಮಂದಿ ಗಾಯಗೊಂಡಿದ್ದಾರೆ’ ಎಂದು ಭಡೆರ್ವಾಲ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಸುಮಿತ್ ಕುಮಾರ್ ಭೂತ್ಯಾಳ್ ಹೇಳಿದ್ದಾರೆ.
ಅಪಘಾತ ಕುರಿತಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮತ್ರಿ ಒಮರ್ ಅಬ್ದುಲ್ಲಾ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮನೋಜ್ ಸಿನ್ಹಾ, ನಮ್ಮ ಭಾರತದ ಧೈರ್ಯಶಾಲಿ 10 ಯೋಧರನ್ನು ಕಳೆದುಕೊಂಡು ಬಹಳ ನೋವಾಗಿದೆ. ನಮ್ಮ ಯೋಧರ ಸೇವೆ ಮತ್ತು ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.