ಅಲೀಭಾಗ್: ಇಂಟಿರಿಯರ್ ಡಿಸೈನರ್ ಹಾಗೂ ಅವರ ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಬುಧವಾರ ರಾತ್ರಿ ಅಲೀಭಾಗ್ ಜೈಲಿನ ಕೋವಿಡ್–19 ಕೇಂದ್ರವಾದ ಸ್ಥಳೀಯ ಶಾಲೆಯಲ್ಲಿ ರಾತ್ರಿ ಕಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೀಭಾಗ್ ನ್ಯಾಯಾಲಯವು ಗೋಸ್ವಾಮಿ ಹಾಗೂ ಇತರ ಆರೋಪಿಗಳನ್ನು ನವೆಂಬರ್ 18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಆದರೆ ನ್ಯಾಯಾಲಯ ಸಮ್ಮತಿಸಲಿಲ್ಲ.
ಬುಧವಾರ ರಾತ್ರಿ ಗೋಸ್ವಾಮಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆರೋಗ್ಯ ತಪಾಸಣೆ ಬಳಿಕ ಅಲೀಭಾಗ್ ಜೈಲಿನ ಕೋವಿಡ್ –19 ಕೇಂದ್ರವಾದ ಅಲೀಭಾಗ್ ನಗರ ಪರಿಷತ್ ಶಾಲೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಫಿರೋಜ್ ಮಹಮ್ಮದ್ ಶೇಖ್ ಹಾಗೂ ನಿತೀಶ್ ಸರ್ದಾ ಅವರನ್ನೂ ನವೆಂಬರ್ 18ರವರೆಗೆ ಕೋರ್ಟ್ ನ್ಯಾಯಾಂಗ ವಶಕ್ಕೆ ನೀಡಿದೆ.
ಗೋಸ್ವಾಮಿ ಅವರ ಜಾಮೀನು ಅರ್ಜಿ ವಿಚಾರಣೆ ಅಲೀಭಾಗ್ ನ್ಯಾಯಾಲಯದಲ್ಲಿ ಗುರುವಾರ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಕೋರ್ಟ್‌ಗೆ ಅರ್ಜಿ: ಅರ್ನಬ್ ಗೋಸ್ವಾಮಿ ಬಂಧನವನ್ನು ಪ್ರಶ್ನಿಸಿ ಅವರ ಪರ ವಕೀಲರು ಗುರುವಾರ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆಯೂ ಅವರು ಕೋರಿದ್ದಾರೆ. ಈ ಕುರಿತ ವಿಚಾರಣೆ ಮಧ್ಯಾಹ್ನ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.