ADVERTISEMENT

ದೇಶದೊಳಕ್ಕೆ ನುಸುಳಲು ಕಾಯುತ್ತಿದ್ದಾರೆ 400ಕ್ಕೂ ಅಧಿಕ ಉಗ್ರರು

ಚಳಿಗಾಲದಲ್ಲಿ ಜಮ್ಮು ಮತ್ತು ಕಾಶ್ಮೀರದೊಳಗೆ ಒಳನುಸುಳಲು ಪ್ರಯತ್ನ

ಪಿಟಿಐ
Published 6 ಜನವರಿ 2021, 15:11 IST
Last Updated 6 ಜನವರಿ 2021, 15:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಆಚಗೆ ಇರುವ ಉಗ್ರರ ಶಿಬಿರಗಳಲ್ಲಿ(ಲಾಂಚ್‌ ಪ್ಯಾಡ್‌) ಪ್ರಸ್ತುತ 400ಕ್ಕೂ ಅಧಿಕ ಉಗ್ರರು ನೆಲೆಸಿದ್ದು, ಚಳಿಗಾಲದಲ್ಲಿ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಸಂಶಯಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಲು ಎಲ್ಲ ಪೊಲೀಸ್‌ ಠಾಣೆ, ಪೊಲೀಸ್‌ ಚೆಕ್‌ಪೋಸ್ಟ್‌ಗಳಿಗೆ ಅಲರ್ಟ್‌ ಮಾಡಲಾಗಿದೆ. ಗಡಿಯಲ್ಲಿರುವ ಹಳ್ಳಿ ರಕ್ಷಣಾ ಸಮಿತಿಗಳಿಗೂ(ವಿಡಿಸಿ) ಎಚ್ಚರಿಕೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಭಾರತದೊಳಗೆ ಉಗ್ರರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದು, ಇದರಿಂದ ಪಾಕಿಸ್ತಾನವು ಈ ರೀತಿ ಚಳಿಗಾಲದಲ್ಲೂ ವ್ಯರ್ಥಪ್ರಯತ್ನವನ್ನು ನಡೆಸುತ್ತಿದೆ. ಗಡಿಯುದ್ದಕ್ಕೂ ಚಳಿಗಾಲದಲ್ಲಿ ಬಹುತೇಕ ಕಣಿವೆಗಳು, ಬೆಟ್ಟಗಳು ಭಾರಿ ಹಿಮಪಾತದಿಂದಾಗಿ ಮುಚ್ಚಿರುತ್ತವೆ. ಇಂಥ ಸಂದರ್ಭದಲ್ಲೂ ಪಾಕಿಸ್ತಾನವು ಉಗ್ರರನ್ನು ಒಳನುಸುಳಿಸಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

2019ರಲ್ಲಿ 141 ಉಗ್ರರು ಒಳನುಸುಳಿರುವುದು ವರದಿಯಾಗಿತ್ತು. ಈ ಸಂಖ್ಯೆ 2020ರಲ್ಲಿ 44ಕ್ಕೆ ಇಳಿಕೆಯಾಗಿದೆ. 2018ರಲ್ಲಿ 143 ಉಗ್ರರು ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳುವಲ್ಲಿ ಯಶಸ್ವಿ ಆಗಿದ್ದರು. ಉಗ್ರರ ಒಳನುಸುಳುವಿಕೆಗೆ ತಡೆಯೊಡ್ಡಲು ಭಾರತ ಯಶಸ್ವಿಯಾದ ಹಿನ್ನೆಲೆಯಲ್ಲಿ, 2020ರಲ್ಲಿ ಪಾಕಿಸ್ತಾನವು 5,100 ಬಾರಿ ಕದನ ವಿರಾಮ ಉಲ್ಲಂಘಿಸಿ ಎಲ್‌ಒಸಿಯಲ್ಲಿರುವ ಭಾರತೀಯ ಸೇನಾಪಡೆಗಳ ನೆಲೆಗಳ ಮೇಲೆ ಗುಂಡಿನ ದಾಳಿ, ಶೆಲ್‌ ದಾಳಿ ನಡೆಸಿತ್ತು. ಹಿಂದೆಂದೂ ಪಾಕಿಸ್ತಾನವು ಇಷ್ಟು ಬಾರಿ ಕದನವಿರಾಮ ಉಲ್ಲಂಘಿಸಿರಲಿಲ್ಲ. ಹೆಚ್ಚಿನ ಉಗ್ರರು ಒಳನುಸುಳಲು ಸಹಕಾರಿಯಾಗುವಂತೆ, ಪಾಕಿಸ್ತಾನ ಸೇನೆಯು ಈ ರೀತಿ ಗುಂಡಿನ ದಾಳಿ ನಡೆಸಿ ಅವರಿಗೆ ರಕ್ಷಣೆ ನೀಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

‘ಎಲ್‌ಒಸಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ(ಪಿಒಕೆ) ಹಲವು ಉಗ್ರರ ಶಿಬಿರಗಳಲ್ಲಿ 300 ರಿಂದ 415 ಉಗ್ರರಿದ್ದು, ಒಳನುಸುಳಿ ಹಿಂಸೆಯ ಮುಖಾಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಸಿದ್ಧರಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಎಲ್‌ಒಸಿಯಲ್ಲಿ ಕಾಶ್ಮೀರ ಕಣಿವೆಯಾಚೆಗೆ ಲಾಂಚ್‌ ಪ್ಯಾಡ್‌ಗಳಲ್ಲಿ 175–210 ಉಗ್ರರಿದ್ದು, ಎಲ್‌ಒಸಿಯಲ್ಲಿ ಜಮ್ಮು ಪ್ರದೇಶದ ಆಚೆ 119–216 ಉಗ್ರರಿದ್ದಾರೆ. ಶಸ್ತ್ರಸಜ್ಜಿತ ಉಗ್ರರು, ಸ್ಫೋಟಕಗಳನ್ನು ಜಮ್ಮು ಕಾಶ್ಮೀರದೊಳಗೆ ಸಾಗಿಸಲು ಸುರಂಗಗಳನ್ನು ಪಾಕಿಸ್ತಾನದ ಏಜೆನ್ಸಿಗಳು ಬಳಸುತ್ತಿವೆ. ಮಾದಕ ವಸ್ತುಗಳನ್ನು, ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದೊಳಗೆ ತರಲು ಡ್ರೋನ್‌ಗಳನ್ನೂ ಬಳಸುತ್ತಿವೆ’ ಎಂದರು.

‘ಪ್ರಸಕ್ತ ವರ್ಷದಲ್ಲಿ ಭಾರಿ ಹಿಮಪಾತದ ನಡುವೆಯೂ ಉಗ್ರರನ್ನು ಒಳನುಸುಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪೂಂಚ್‌ಗೆ ಉಗ್ರರು ಒಳನುಸುಳಿದ್ದರು, ಆದರೆ ಅವರನ್ನು ಭದ್ರತಾ ಪಡೆ ಸಿಬ್ಬಂದಿ ನಗ್ರೋಟದಲ್ಲಿ ಹೊಡೆದುರುಳಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಭಾರತ–ಪಾಕಿಸ್ತಾನ ಗಡಿಯಲ್ಲಿ 20ಕ್ಕೂ ಅಧಿಕ ಒಳನುಸುಳುವ ಮಾರ್ಗಗಳನ್ನು ಸಿಬ್ಬಂದಿ ಪತ್ತೆಹಚ್ಚಿದ್ದು, ಈ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ’ ಎಂದು ಮತ್ತೋರ್ವ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.