
ಶ್ರೀನಗರ : ‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಮೇಲಿನ ದಾಳಿ ಆರಂಭವಾಗಿದ್ದು 2019ರಲ್ಲಿ ಅಲ್ಲ. ಅದು, 2015ರಲ್ಲಿ ಪಿಡಿಪಿ– ಬಿಜೆಪಿ ಸರ್ಕಾರ ರಚನೆ ಆದಾಗಿನಿಂದಲೇ ಆರಂಭವಾಗಿತ್ತು’ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದರು.
ಶನಿವಾರ ಇಲ್ಲಿನ ಬಡಗಾಂ ವಿಧಾನಸಭಾ ಕ್ಷೇತ್ರದ ಮೈರ್‌ಗುಂಡ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ಈಗಾಗಲೇ ಗರಿಷ್ಠ ಮಟ್ಟದಲ್ಲಿ ಹಾನಿ ಉಂಟುಮಾಡಿದೆ. ವಿಶೇಷ ಸ್ಥಾನಮಾನ ವಾಪಸ್ ಪಡೆದ ನಂತರ, ನಮ್ಮ ಅಸ್ತಿತ್ವಕ್ಕೆ ಆತಂಕ ಎದುರಾಗಿದೆ. ಈಗ ನಮ್ಮ ನಕ್ಷೆಯೂ ಉಳಿದಿಲ್ಲ’ ಎಂದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಯೋಜನೆಗಳಿಗೆ ಪಿಡಿಪಿಯು ಹಾದಿ ಸುಗಮಗೊಳಿಸುತ್ತಿದೆ. 2014ರ ಚುನಾವಣೆಯಲ್ಲಿ, ಬಿಜೆಪಿಯನ್ನು ಹೊರಗಿಡಲು ದಿ. ಮುಫ್ತಿ ಮಹಮದ್ ಸಯೀದ್ ಮತ್ತು ಅವರ ಪುತ್ರಿ ಮೆಹಬೂಬಾ ಮುಫ್ತಿ ಮನೆ, ಮನೆಗೆ ಭೇಟಿ ನೀಡಿ ಜನರಿಗೆ ಮನವಿ ಮಾಡಿದ್ದರು. ಆದರೆ, ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಪಿಡಿಪಿಯು ಬಿಜೆಪಿಯೊಂದಿಗೆ ಸೇರಿ ಅಧಿಕಾರ ಹಿಡಿಯಿತು’ ಎಂದು ಅವರು ಹೇಳಿದರು.
ಬಡಗಾಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನವೆಂಬರ್ 11 ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.