ADVERTISEMENT

ಅರುಣಾಚಲ ಪೊಲೀಸರು ಮತ್ತು ಯೋಧರ ನಡುವೆ ಸಂಘರ್ಷ, ಸೇನಾ ಅಧಿಕಾರಿಯಿಂದ ಧಮಕಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 10:54 IST
Last Updated 7 ನವೆಂಬರ್ 2018, 10:54 IST
   

ಇಟಾನಗರ: ಅರುಣಾಚಲ ಪ್ರದೇಶದ ವೆಸ್ಟ್‌ ಕಮೆಂಗ್‌ ಜಿಲ್ಲೆಯಲ್ಲಿ ಪೊಲೀಸರು ಮತ್ತು ಸೇನಾ ಯೋಧರ ನಡುವೆ ಸಂಘರ್ಷ ಉಂಟಾಗಿದ್ದು ನೂರಕ್ಕೂ ಹೆಚ್ಚು ಯೋಧರು ಠಾಣೆಗೆ ಮುತ್ತಿಗೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ಅರುಣಾಚಲ ಪ್ರದೇಶ ಪೊಲೀಸರಿಗೆ ಧಮಕಿ ಹಾಕಿದ್ದಾರೆ. ’ಯೋಧರನ್ನು ಟಚ್‌ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಶನಿವಾರ ಬೊಂಡಿಲ್ಲಾ ಪಟ್ಟಣದಲ್ಲಿರುವಅರುಣಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಕಚೇರಿ ಪಕ್ಕದಲ್ಲಿರುವ ಪೊಲೀಸ್‌ ಠಾಣೆಗೆನೂರಕ್ಕೂ ಹೆಚ್ಚು ಯೋಧರು ಮುತ್ತಿಗೆ ಹಾಕಿದ್ದಾರೆ. ಈ ನಡುವೆ ಪೊಲೀಸರು ಮತ್ತು ಯೋಧರ ನಡುವೆ ಸಂಘರ್ಷ ಉಂಟಾಗಿದೆ ಎಂದು ’ಈಸ್ಟ್‌ ಮೋಜೊ’ ಸುದ್ದಿ ತಾಣ ವರದಿ ಮಾಡಿದೆ.

ADVERTISEMENT

ಸೇನಾ ಯೋಧರು ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ: ಕಳೆದ ಶುಕ್ರವಾರ ಬೊಂಡಿಲ್ಲಾದ ಕ್ರೀಡಾಂಗಣದಲ್ಲಿ ಬುದ್ಧ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ವೇಳೆ ಸ್ಥಳೀಯ ಪೊಲೀಸರು ಮತ್ತು ಸೇನಾ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಧ್ಯಪಾನ ಮಾಡಿದ್ದ ಇಬ್ಬರು ಯೋಧರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದರು. ಇದನ್ನು ಖಂಡಿಸಿದ್ದಕ್ಕೆ ಸೇನಾ ಯೋಧರುಪೊಲೀಸರ ಮೇಲೆಹಲ್ಲೆ ನಡೆಸಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿದ್ದ ಯೋಧರನ್ನು ಠಾಣೆಗೆ ಕರೆತಂದಿದ್ದರು. ಇದರಿಂದ ಸೇನಾ ಅಧಿಕಾರಿಗಳು ಕುಪಿತಗೊಂಡು ಶನಿವಾರ ಪೊಲೀಸ್‌ ಠಾಣೆಯ ಮೇಲೆ ಮುತ್ತಿಗೆ ಹಾಕಿದ್ದರು.

ಶುಕ್ರವಾರ ರಾತ್ರಿ ಬುದ್ದ ಮಹೋತ್ಸವ ಕಾರ್ಯಕ್ರಮದ ವೇಳೆ ಪಾನಮತ್ತರಾಗಿದ್ದ ಯೋಧರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದರು. ಹಾಗೂ ಇಬ್ಬರು ಪೊಲೀಸರು ಮತ್ತು ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಅವರನ್ನು ಠಾಣೆಗೆ ಕರೆತರಲಾಗಿತ್ತು ಎಂದು ಘಟನೆ ಬಗ್ಗೆಬೊಂಡಿಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜಾ ಬಾಂತೀಯಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಸೇನೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಶುಕ್ರವಾರ ತಡ ರಾತ್ರಿ ಹಿರಿಯ ಅಧಿಕಾರಿಯೊಬ್ಬರು ಠಾಣೆಗೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದರು. ಮತ್ತೆ ಶನಿವಾರ ನೂರಕ್ಕೂ ಹೆಚ್ಚು ಯೋಧರು ಠಾಣೆಗೆ ಮುತ್ತಿಗೆ ಹಾಕಿದ್ದರು. ಕೇಂದ್ರದ ಮೀಸಲು ಪಡೆ ಪೊಲೀಸರು ಸ್ಥಳಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದುರಾಜಾ ಬಾಂತೀಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.