ADVERTISEMENT

ಅರುಣಾಚಲ: ಚೀನಾ ಮತ್ತೆ ಕ್ಯಾತೆ, ಭಾರತ ತಿರುಗೇಟು

ಊರುಗಳ ಹೆಸರು ಬದಲು ವ್ಯರ್ಥ, ಅಸಂಬದ್ಧ ಯತ್ನ: ಭಾರತ ತಿರುಗೇಟು

​ಪ್ರಜಾವಾಣಿ ವಾರ್ತೆ
ಪಿಟಿಐ
Published 15 ಮೇ 2025, 0:30 IST
Last Updated 15 ಮೇ 2025, 0:30 IST
   

ನವದೆಹಲಿ: ಅರುಣಾಚಲ ಪ್ರದೇಶದ 27 ಪ್ರದೇಶಗಳ ಹೆಸರನ್ನು ಬದಲಿಸಿ ಚೀನಾ ಪಟ್ಟಿ ಬಿಡುಗಡೆ ಮಾಡಿದೆ. ಚೀನಾದ ಈ ಕ್ರಮಕ್ಕೆ ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಇದೊಂದು ‘ವ್ಯರ್ಥ’ ಮತ್ತು ‘ಅಸಂಬದ್ಧ’ ಯತ್ನವಾಗಿದೆ. ಈ ಪ್ರದೇಶಗಳು ಹಿಂದೆಯೂ ಭಾರತದ್ದು, ಇಂದು ಮತ್ತು ಮುಂದೆಯೂ ಭಾರತದ್ದೇ ಆಗಿರಲಿವೆ’ ಎಂದು ಹೇಳಿದೆ. ಪಾಕಿಸ್ತಾನ ಜೊತೆಗೆ ಸಂಘರ್ಷ ಶಮನವಾದ ಬೆನ್ನಲ್ಲೇ ಚೀನಾ ಈ ಕ್ರಮ ಕೈಗೊಂಡಿದೆ.

ಚೀನಾ ಪಟ್ಟಿ ಬಿಡುಗಡೆ ಮಾಡಿರುವ ಬಗ್ಗೆ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ
ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಉತ್ತರಿಸಿದರು.

‘ಬೇರೆ ಬೇರೆ ಹೆಸರುಗಳನ್ನು ಇಡುವುದರಿಂದ ವಾಸ್ತವ ಬದಲಾಗುವುದಿಲ್ಲ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು ಇನ್ನು ಮುಂದೆಯೂ ಹಾಗೆಯೇ ಇರಲಿದೆ’ ಎಂದರು.

ADVERTISEMENT

2020ರಲ್ಲಿ ಗಾಲ್ವನ್‌ ಸಂಘರ್ಷ ನಡೆದು ಸುಮಾರು ನಾಲ್ಕು ವರ್ಷಗಳ ಬಳಿಕ ಭಾರತ ಮತ್ತು ಚೀನಾದ ಸಂಬಂಧವು ಉತ್ತಮಗೊಳ್ಳುವ ಹಂತದಲ್ಲಿತ್ತು. ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸಿಕೊಳ್ಳುವ ಬಗ್ಗೆ ಎರಡೂ ದೇಶಗಳು ಹಲವು ಕ್ರಮಗಳನ್ನು ಕೈಗೊಂಡಿದ್ದವು.

ಭಾರತ–ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ, ಪಾಕಿಸ್ತಾನದ ಪರ ನಿಲ್ಲುವುದಾಗಿ ಚೀನಾ ಬಹಿರಂಗವಾಗಿಯೇ ಹೇಳಿತ್ತು.

ನಿರ್ಬಂಧದ ಬಳಿಕ ವಾಪಸ್‌:

ಪಾಕಿಸ್ತಾನದ ಅಪಪ್ರಚಾರಗಳನ್ನು ಸುದ್ದಿ ಮಾಡಿದ್ದಕ್ಕಾಗಿ ಚೀನಾದ ‘ಗ್ಲೋಬಲ್‌ ಟೈಮ್ಸ್‌’ ಮತ್ತು ‘ಷಿನ್‌ಹುವಾ’ ಪತ್ರಿಕೆಗಳ ‘ಎಕ್ಸ್‌’ ಖಾತೆಗಳಿಗೆ ಭಾರತ ಬುಧವಾರ ನಿರ್ಬಂಧ ಹೇರಿತ್ತು. ಈ ಖಾತೆಗಳಿಗೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರವು ‘ಎಕ್ಸ್‌’ಗೆ ಸೂಚನೆ ನೀಡಿತ್ತು. ಆದರೆ, ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿ ವಾಪಸ್‌ ಪಡೆದಿದೆ.

ರಣಧೀರ್‌ ಜೈಸ್ವಾಲ್‌

ಉತ್ತಮಗೊಳ್ಳುತ್ತಿದ್ದ ಸಂಬಂಧ

2020ರಲ್ಲಿ ಚೀನಾ ಹಾಗೂ ಭಾರತದ ಸೈನಿಕರ ಮಧ್ಯೆ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಭಾರಿ ಸಂಘರ್ಷ ನಡೆದಿತ್ತು. ಈ ಬಳಿಕ ಎರಡೂ ದೇಶಗಳ ಸಂಬಂಧ ಹಳಸಿತ್ತು. ಕಳೆದ ವರ್ಷದಿಂದ ಚೀನಾ–ಭಾರತ ಮಧ್ಯೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲು ಆರಂಭಿಸಿದ್ದವು. ತಮ್ಮ ನಡುವಿನ ಸಂಘರ್ಷ ಶಮನಕ್ಕೆ ಹಲವು ಕ್ರಮಗಳನ್ನೂ ಕೈಗೊಂಡಿದ್ದವು.

* ಗಾಲ್ವನ್‌ ಸಂಘರ್ಷದ ಬಳಿಕ ಕಳೆದ ಐದು ವರ್ಷಗಳಿಂದ ನೇರ ವಿಮಾನಯಾನ ರದ್ದುಗೊಂಡಿತ್ತು. ಜೊತೆಗೆ ಮಾನಸ ಸರೋವರ ಯಾತ್ರೆಯನ್ನೂ ನಿಲ್ಲಿಸಲಾಗಿತ್ತು (ಕೋವಿಡ್‌ ಕಾರಣದಿಂದಲೂ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಸಂಘರ್ಷ ಬಳಿಕ ಈ ಸ್ಥಿತಿ ಮುಂದುವರಿಯಿತು). ಎರಡೂ ದೇಶಗಳ ಮಾತುಕತೆಗಳ ಬಳಿಕ ನೇರ ವಿಮಾನಯಾನವನ್ನೂ ಮಾನಸ ಸರೋವರ ಯಾತ್ರೆಯನ್ನೂ ಪುನರ್‌ ಆರಂಭಿಸಲಾಗಿದೆ

* ಡೆಮ್‌ಚೊಕ್‌ ಮತ್ತು ದೆಪ್ಸಾಂಗ್‌ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಎರಡೂ ದೇಶಗಳು ಹಿಂಪಡೆದುಕೊಂಡಿದ್ದವು

* ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್‌ ಅವರು ರಷ್ಯಾದ ಕಜಾನ್‌ನಲ್ಲಿ 2024ರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ದ್ವಿಪಕ್ಷೀಯ ಸಂಬಂಧ ಉತ್ತಮಪಡಿಸಿಕೊಳ್ಳುವುದಕ್ಕೆ ಇಬ್ಬರೂ ಒಪ್ಪಿಗೆ ನೀಡಿದ್ದರು

* ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸಂಬಂದಕ್ಕೆ 75 ವರ್ಷ ಸಂದ ಸಂದರ್ಭದಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಚೀನಾದ ರಾಯಭಾರಿಯೊಂದಿಗೆ ದೆಹಲಿಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದರು

ಜಾಂಗ್‌ನ್ಯಾನ್‌ನ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟ ಹೆಸರು) ಕೆಲವು ಪ್ರದೇಶಗಳ ಹೆಸರನ್ನು ಬದಲಾಯಿಸಿದ್ದೇವೆ. ಇದು ಚೀನಾದ ಸಾರ್ವಭೌಮತ್ವದ ಹಕ್ಕಿನ ಅಡಿಯಲ್ಲಿಯೇ ಇದೆ
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ

ಪಾಕ್‌ ಜತೆಗಿನ ಸಂಘರ್ಷ: ದಿನದ ಬೆಳವಣಿಗೆ

*‘ಭಾರತದ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಮೇಲ್ವಿಚಾರಣೆಯಲ್ಲಿ ರೂಪಿಸಲಾಗಿತ್ತು’ ಎಂದು ಪಾಕ್‌ನ ಪಂಜಾಬ್ ಪ್ರಾಂತ್ಯದ ಮಾಹಿತಿ ಸಚಿವೆ ಅಜ್ಮಾ ಬುಖಾರಿ ಹೇಳಿಕೆ

*ಟರ್ಕಿಯ ಐನಾನು ವಿಶ್ವವಿದ್ಯಾಲಯದ ಜೊತೆಗಿನ ಶೈಕ್ಷಣಿಕ ಒಪ್ಪಂದವನ್ನು (ಎಂಒಯು) ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಮಾನತಿನಲ್ಲಿ ಇಡಲಾಗಿದೆ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಧಿಕಾರಿಗಳ ಹೇಳಿಕೆ

*ಭಾರತ ವಿರುದ್ಧದ ದಾಳಿಯಲ್ಲಿ ಪಾಕಿಸ್ತಾನ ಬಳಸಿರುವ ಡ್ರೋನ್‌ಗಳನ್ನು ಟರ್ಕಿ ಪೂರೈಸಿದೆ. ಆದ್ದರಿಂದ ಈ ಎರಡು ದೇಶಗಳಿಂದ ಆಮದಾಗುವ ಸರಕುಗಳಿಗೆ ಕೇಂದ್ರ ಸರ್ಕಾರವು ಬಹಿಷ್ಕಾರ ಹೇರಬೇಕು ಎಂದು ವರ್ತಕರ ವಲಯದ ಒತ್ತಾಯ

*ಪಾಕಿಸ್ತಾನದೊಂದಿಗೆ ಅಪವಿತ್ರ ಮೈತ್ರಿ ಹೊಂದಿರುವ ಟರ್ಕಿ ಮೇಲೆ ಆರ್ಥಿಕ ನಿರ್ಬಂಧ ವಿಧಿಸಬೇಕು’ ಎಂದು ಆರ್‌ಎಸ್‌ಎಸ್‌ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ (ಎಸ್‌ಜೆಎಂ) ಆಗ್ರಹ

*ಕಾಶ್ಮೀರ ಕಣಿವೆಯ ಬಹುತೇಕ ಭಾಗಗಳಲ್ಲಿ ಬುಧವಾರದಿಂದ ಶಾಲಾ–ಕಾಲೇಜುಗಳು ಪುನರಾರಂಭ

ಭದ್ರತಾ ಸ್ಥಿತಿ: ಸಂಪುಟ ಸಮಿತಿ ಪರಾಮರ್ಶೆ

ಭಾರತ–ಪಾಕಿಸ್ತಾನದ ನಡುವಿನ ಕದನ ವಿರಾಮದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ಬುಧವಾರ ನಡೆಯಿತು. ‘ಆಪರೇಷನ್ ಸಿಂಧೂರ’ ಬಳಿಕದ ಭದ್ರತಾ ಸ್ಥಿತಿಯ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಪ್ರಸ್ತುತ ಪರಿಸ್ಥಿತಿ ಮತ್ತು ಭಾರತದ ಸನ್ನದ್ಧತೆ ಬಗ್ಗೆ ಚರ್ಚಿಸಿದರು.

ನಂತರ ಪ್ರಧಾನಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಪಾಕ್ ಬೆಂಬಲಿತ ಉಗ್ರರ ಸದೆ ಬಡಿಯಲು ನಡೆಸಿದ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಅವರನ್ನು ಸಚಿವರು ಶ್ಲಾಘಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ‘ಆಪರೇಷನ್ ಸಿಂಧೂರವು ದೇಶದ ಶ್ರೇಷ್ಠ ನಾಯಕತ್ವಕ್ಕೆ ಸಾಕ್ಷ್ಯ. ಸಶಸ್ತ್ರ ಪಡೆಗಳ ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.