ADVERTISEMENT

ಅರವಿಂದ್ ಕೇಜ್ರಿವಾಲ್ ವಿದೇಶ ಪ್ರವಾಸಕ್ಕೆ ಮೋದಿ ಸರ್ಕಾರ ತಡೆ: ಎಎಪಿ ಆರೋಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 12:46 IST
Last Updated 8 ಅಕ್ಟೋಬರ್ 2019, 12:46 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ಡೆನ್ಮಾರ್ಕ್‌ನಲ್ಲಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ನರೇಂದ್ರಮೋದಿ ನೇತೃತ್ವದಸರ್ಕಾರ ನಮ್ಮ ಜತೆ ಯಾಕೆ ಈ ರೀತಿ ವರ್ತಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ಡೆನ್ಮಾರ್ಕ್‌ನಲ್ಲಿ ನಡೆಯುತ್ತಿರುವ ಸಿ40 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾಗಿಯಾಗಲು ಅರವಿಂದ್ ಕೇಜ್ರಿವಾಲ್ ಅವರಿಗೆ ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಿದೆ.

ADVERTISEMENT

ದೆಹಲಿಯ ಮುಖ್ಯಮಂತ್ರಿ ಡೆನ್ಮಾರ್ಕ್‌ಗೆ ರಜಾಕಾಲ ಕಳೆಯಲು ಹೋಗುತ್ತಿಲ್ಲ. ಏಷ್ಯಾದ 100 ನಗರಗಳ ಮೇಯರ್‌ಗಳ ಜತೆ ಚರ್ಚೆ ಮಾಡುವುದಕ್ಕಾಗಿಹೋಗುತ್ತಿದ್ದಾರೆ. ಈ ಮೂಲಕ ದೇಶದಲ್ಲಿನ ಮಾಲಿನ್ಯವನ್ನು ನಿಯಂತ್ರಿಸಲಿರುವ ವಿಧಾನದ ಬಗ್ಗೆಯೂ ಅವರು ಅರಿತುಕೊಳ್ಳಬಹುದು. ಇಲ್ಲಿಯವರಗೆ ಮುಖ್ಯಮಂತ್ರಿಯವರ ಎಷ್ಟು ಅಧಿಕೃತ ಭೇಟಿಗಳನ್ನು ರದ್ದು ಮಾಡಿದ್ದೀರಿ? ನಾವು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಅದಕ್ಕೆ ಅನುಮತಿ ಸಿಕ್ಕಿಲ್ಲ ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ಕೇಜ್ರಿವಾಲ್ ಅವರ ಪ್ರವಾಸವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂಬುದರ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ದೆಹಲಿ ಸರ್ಕಾರದ ಅಧಿಕಾರಿಗಳ ಪ್ರಕಾರ ಮುಖ್ಯಮಂತ್ರಿ ಕೇಜ್ರಿವಾಲ್, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿತ್ತು. ಆದರೆ ಡೆನ್ಮಾರ್ಕ್ ಪ್ರವಾಸದ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ಅನುಮತಿ ಸಿಕ್ಕಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಅಕ್ಟೋಬರ್ 9ರಂದು ಶೃಂಗಸಭೆ ಆರಂಭವಾಗಲಿದ್ದುಅಕ್ಟೋಬರ್ 12ರಂದು ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.