ADVERTISEMENT

ಸಿಎಂ ಅಭ್ಯರ್ಥಿ ಘೋಷಿಸದ ಬಿಜೆಪಿ: ಅಮಿತ್ ಶಾರನ್ನು ಚರ್ಚೆಗೆ ಕರೆದ ಕೇಜ್ರಿವಾಲ್

ಏಜೆನ್ಸೀಸ್
Published 5 ಫೆಬ್ರುವರಿ 2020, 9:43 IST
Last Updated 5 ಫೆಬ್ರುವರಿ 2020, 9:43 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ‘ಬುಧವಾರ ಮಧ್ಯಾಹ್ನ 1 ಗಂಟೆಯೊಳಗೆ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಲ್ಲಿ ವಿಫಲವಾದ ಬಿಜೆಪಿ ವಿರುದ್ಧ ಕಿಡಿಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.

ಮಂಗಳವಾರವಷ್ಟೇ ಮಾತನಾಡಿದ್ದ ಅವರು, 'ಬುಧವಾರ ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿಯು ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು. ಅವರೊಂದಿಗೆ ನಾನು ಸಾರ್ವಜನಿಕ ಚರ್ಚೆಗೆ ಸಿದ್ಧ’ ಎಂದು ಬಿಜೆಪಿಗೆ ಗಡುವು ನೀಡಿದ್ದರು. ಒಂದು ವೇಳೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದಲ್ಲಿ ಮುಂದಿನ ಕ್ರಮವನ್ನು ತಿಳಿಸಲು ಮತ್ತೊಂದು ಪತ್ರಿಕಾಗೋಷ್ಠಿ ಕರೆಯುವುದಾಗಿ ಕೇಜ್ರಿವಾಲ್ ಹೇಳಿದ್ದರು.

ಅದರಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚರ್ಚೆ ನಡೆಸುವುದು ಒಳ್ಳೆಯದು. ಬನ್ನಿ ಚರ್ಚೆ ಮಾಡೋಣ. ದೆಹಲಿ ಜನರು ಬಿಜೆಪಿಗೆ ಏಕೆ ಮತ ಚಲಾಯಿಸಬೇಕು ಎನ್ನುವ ಕುರಿತು ತಿಳಿಯಬೇಕಿದೆ. ದೇಶದ ಗೃಹ ಸಚಿವರು ಏಕೆ ಶಾಹೀನ್ ಬಾಗ್‌ ರಸ್ತೆಯನ್ನು ತೆರವುಗೊಳಿಸುತ್ತಿಲ್ಲ. ಈ ವಿಚಾರದಲ್ಲಿ ಏಕೆ ಅವರು ಹೊಲಸು ರಾಜಕೀಯ ಮಾಡುತ್ತಿದ್ದಾರೆ? ಎಂಬುದನ್ನು ತಿಳಿಯಬೇಕಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಶಕ್ತಿ ಜನರಿಗಿದೆ. ಜನರು ಅಭ್ಯರ್ಥಿಗೆ ಮತ ನೀಡುವ ಬದಲು ಕೇಜ್ರಿವಾಲ್‌ರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೆಂದು ಮತ ನೀಡುತ್ತಾರೆ. ಆದರೆ ಬಿಜೆಪಿಯು ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿಲ್ಲ. ಇದರರ್ಥ ಬಿಜೆಪಿಗೆ ಮತ ನೀಡಿದರೆ ಅದು ವ್ಯರ್ಥವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆಯು ಪ್ರಮುಖವಾಗಿರುತ್ತದೆ. ಆದರೆ ನಿಮ್ಮ ಕಾರ್ಯಕರ್ತನೇ ನನ್ನೊಂದಿಗೆ ಚರ್ಚಿಸುತ್ತಾನೆ ಎಂದು ಹೇಳದಿರಿ. ಅದು ಹೋರಾಟದಿಂದ ನೀವು ಹಿಂದೆ ಸರಿಯುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ರಾಮ ಮಂದಿರಕ್ಕಾಗಿ ಮತ ನೀಡಿ ಎನ್ನುತ್ತಾರೆ ಆದರೆ ಅದಕ್ಕಾಗಿಯೇ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲಾಗಿದೆ. ಸಾಮಾನ್ಯ ಜನರಿಗೆ ಏಕೆ ತೊಂದರೆ ನೀಡುತ್ತಿದ್ದೀರಿ? ಕೇವಲ ನನ್ನನ್ನು ಸೋಲಿಸಲೆಂದು ಏಕೆ ಹಲವು ರಾಜಕಾರಣಿಗಳನ್ನು ಕರೆತರುತ್ತಿದ್ದೀರಿ? ದೆಹಲಿಯ ಪುತ್ರನೊಬ್ಬ ಹೇಗೆ ಭಯೋತ್ಪಾದಕನಾಗುತ್ತಾನೆ? ದೆಹಲಿಯಾದ್ಯಂತ ಏಕೆ ಕಸ ಕಾಣುತ್ತಿದೆ? ಮುನ್ಸಿಫಲ್ ಕಾರ್ಪೊರೇಷನ್ ಶಾಲೆಗಳು ಮತ್ತು ಆಸ್ಪತ್ರೆಗಳು ಏಕೆ ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.