ADVERTISEMENT

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 'ಮಹಾ ನಟ': ಗೌತಮ್ ಗಂಭೀರ್

ಏಜೆನ್ಸೀಸ್
Published 5 ಫೆಬ್ರುವರಿ 2020, 5:53 IST
Last Updated 5 ಫೆಬ್ರುವರಿ 2020, 5:53 IST
ಅರವಿಂದ ಕೇಜ್ರಿವಾಲ್ ಮತ್ತು ಗೌತಮ್ ಗಂಭೀರ್
ಅರವಿಂದ ಕೇಜ್ರಿವಾಲ್ ಮತ್ತು ಗೌತಮ್ ಗಂಭೀರ್   

ನವದೆಹಲಿ: ದೆಹಲಿ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಹಾನ್ ನಟ ಎಂದು ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರತ್ತ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಹೇಳಿರುವ ಬೆನ್ನಲ್ಲೇ, ಅಧಿಕಾರಕ್ಕಾಗಿ ಅರವಿಂದ ಕೇಜ್ರಿವಾಲ್ ಯಾವ ಮಟ್ಟದ ನಾಟಕವನ್ನಾದರೂ ಆಡುತ್ತಾರೆ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇವರೊಬ್ಬ ಅದ್ಭುತ ಮುಖ್ಯಮಂತ್ರಿ!! ಮೊದಲಿಗೆ ಅಣ್ಣಾ ಹಜಾರೆಗೆ ಸುಳ್ಳು, ನಂತರ ತನ್ನ ಸ್ನೇಹಿತರಿಗೆ ಸುಳ್ಳು ಮತ್ತು ಸಾವಿರಾರು ದೆಹಲಿ ಜನರಿಗೆ ಸುಳ್ಳು ಹೇಳಿದರು. ಇವರು ಮುಖ್ಯಮಂತ್ರಿಯೋ ಅಥವಾ ಮಹಾ ನಟರಾ? ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ, 'ನಾನು ದೆಹಲಿಯ ಯುವಕರಿಗೆ ಮನವಿ ಮಾಡುತ್ತೇನೆ. ಫೆಬ್ರವರಿ 8 ರಂದು ದೆಹಲಿಯ ಚುನಾವಣೆ ನಡೆಯಲಿದೆ. ಆ ಚುನಾವಣೆ ಕೇವಲ ಯುದ್ಧವಲ್ಲ ಬದಲಿಗೆ ಭವಿಷ್ಯವನ್ನು ಉಳಿಸಲು ನಡೆಯುವ ಹೋರಾಟ. ನಾವು ಈ ಯುದ್ಧಗಳಲ್ಲಿ ಒಟ್ಟಿಗೆ ಹೋರಾಡುತ್ತೇವೆ ಮತ್ತು ದೆಹಲಿಯನ್ನು ಮತ್ತೆ 'ದೆಹಲಿ'ಯನ್ನಾಗಿ ಮಾಡುತ್ತೇವೆ. ಜೈ ಹಿಂದ್' ಎಂದು ಕಿಡಿಕಾರಿದ್ದಾರೆ.

70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ಕೈಗೊಂಡು ದೆಹಲಿ ಗದ್ದುಗೆಯನ್ನೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.