ADVERTISEMENT

ಮೊಹಲ್ಲಾ ಕ್ಲಿನಿಕ್, ಶಾಲೆಗಳ ವೀಕ್ಷಣೆಗೆ ಪ್ರಧಾನಿ ಆಹ್ವಾನಿಸಿದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 12:37 IST
Last Updated 21 ಜೂನ್ 2019, 12:37 IST
   

ನವದೆಹಲಿ: ದೆಹಲಿಯ ಮೊಹಲ್ಲಾ ಕ್ಲಿನಿಕ್ ಮತ್ತು ಶಾಲೆಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಜೊತೆಗೆ ಸೇರಿಸಬಹುದೇ ಎಂದು ಕೋರಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಪ್ರಧಾನಿ ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಗೈರುಹಾಜರಾಗಿದ್ದ ಕೇಜ್ರಿವಾಲ್, ಶುಕ್ರವಾರ ಪ್ರಧಾನಿಯವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರಕ್ಕೆ ದೆಹಲಿ ಸರ್ಕಾರ ಸರ್ವ ರೀತಿಯಲ್ಲೂ ಸಹಕಾರ ನೀಡುವುದಾಗಿ ಹೇಳಿದ್ದಾರೆ.‌

‘ಆಯುಷ್ಮಾನ್ ಭಾರತ್‌ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದೆ. ದೆಹಲಿ ಸರ್ಕಾರದ ಆರೋಗ್ಯ ಯೋಜನೆ ದೊಡ್ಡದಾಗಿದ್ದು ಹೆಚ್ಚು ವ್ಯಾಪ್ತಿ ಹೊಂದಿದೆ ಎಂಬುದನ್ನು ಪ್ರಧಾನಿಯವರ ಗಮನಕ್ಕೆ ತರಲಾಯಿತು. ಆದರೂ ಆಯುಷ್ಮಾನ್ ಯೋಜನೆಯನ್ನು ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಜೊತೆ ಸೇರಿಸಬಹುದೇ ಎಂದು ಕೋರಿದ್ದೇನೆ. ಎಎಪಿ ಸರ್ಕಾರ ನಿರ್ವಹಿಸುತ್ತಿರುವ ಮೊಹಲ್ಲಾ ಕ್ಲಿನಿಕ್ ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಅವರನ್ನು ಆಹ್ವಾನಿಸಲಾಯಿತು’ ಎಂದು ಕ್ರೇಜಿವಾಲ್ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ADVERTISEMENT

ಇದೇ ತಿಂಗಳ ಆರಂಭದಲ್ಲಿ ಕೇಜ್ರಿವಾಲ್, ತಮ್ಮ ಸರ್ಕಾರದ ಆರೋಗ್ಯ ಯೋಜನೆ, ಕೇಂದ್ರದ ಯೋಜನೆಗಿಂತ ಹತ್ತು ಪಟ್ಟು ದೊಡ್ಡದು ಮತ್ತು ಸಮಗ್ರವಾಗಿದೆ ಎಂದು ಹೇಳಿದ್ದರು.ಇದಕ್ಕೂ ಮುನ್ನ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ‘ಎಎಪಿ ಸರ್ಕಾರ ಕೇಂದ್ರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಯೋಜನೆಯನ್ನು ಅಳವಡಿಸಿಕೊಳ್ಳುವುದಿಲ್ಲ’ ಎಂದಿದ್ದರು.

‘ರಾಜಧಾನಿ ದೆಹಲಿ ಅಭಿವೃದ್ಧಿಗಾಗಿ ಕೇಂದ್ರ ಮತ್ತು ಎಎಪಿ ಜತೆಗೂಡಿ ಕೆಲಸ ಮಾಡುವುದು ಅತ್ಯಗತ್ಯ. ಇದಕ್ಕಾಗಿ ಎಎಪಿ ಕೇಂದ್ರದ ಜತೆ ಕೈಜೋಡಿಸಲಿದೆ. ದೆಹಲಿ ಸರ್ಕಾರ ರೂಪಿಸಿರುವ ಮಳೆಗಾಲದಲ್ಲಿ ಯುಮನಾ ನದಿ ನೀರು ಸಂಗ್ರಹ ಯೋಜನೆ ಕಾರ್ಯರೂಪಕ್ಕೆ ಬರಲು ಕೇಂದ್ರದ ಬೆಂಬಲ ಕೋರಿದ್ದೇನೆ. ಒಂದು ಮಳೆಗಾಲದಲ್ಲಿ ಯಮುನೆಯ ನೀರು ಸಂಗ್ರಹಿಸಿದರೆ, ದೆಹಲಿಯ ಒಂದು ವರ್ಷದ ನೀರಿನ ಬೇಡಿಕೆಯನ್ನು ಪೂರೈಸಬಹುದು’ಎಂದು ಕ್ರೇಜಿವಾಲ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನೇತೃತ್ವ ಎನ್‌ಡಿಎ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಕ್ರೇಜಿವಾಲ್ ಪ್ರಧಾನಿಯವರನ್ನು ಭೇಟಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.