ADVERTISEMENT

ಗೋವಾ ಜನರು ಪ್ರಾಮಾಣಿಕರನ್ನು ಬಯಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್‌

ಪಿಟಿಐ
Published 31 ಜನವರಿ 2026, 15:27 IST
Last Updated 31 ಜನವರಿ 2026, 15:27 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ಪಣಜಿ : ‘ಗೋವಾ ಜನರು ರಾಜ್ಯದಲ್ಲಿ ‘ಪ್ರಾಮಾಣಿಕ ಮತ್ತು ಜನಕೇಂದ್ರಿತವಾದ ರಾಜಕಾರಣ’ವನ್ನು ಬಯಸುತ್ತಾರೆ. ನಮ್ಮ ಪಕ್ಷ ಅವರ ನಿರೀಕ್ಷೆ ಮತ್ತು ಬಯಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತದೆ’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ಹೇಳಿದ್ದಾರೆ.

ಮೂರು ದಿನಗಳ ಭೇಟಿಗಾಗಿ ಶುಕ್ರವಾರ ಗೋವಾಕ್ಕೆ ಬಂದಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ,  ಪಕ್ಷ ಬಲವರ್ಧನೆ ಕುರಿತು ಸ್ಥಳೀಯ ಮುಖಂಡರ ಜೊತೆ ಶನಿವಾರ ಸಭೆ ನಡೆಸಿದರು. ಆನಂತರ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‌‘ಗೋವಾ ಜನರು ಪ್ರಾಮಾಣಿಕವಾದ ಪರ್ಯಾಯ ಶಕ್ತಿಯನ್ನು ಬಯಸುತ್ತಿದ್ದಾರೆ. ಜನರ ಜೊತೆಗೂಡಿ ಪಕ್ಷವನ್ನು ಬಲಪಡಿಸುತ್ತೇವೆ’ ಎಂದಿದ್ದಾರೆ.

40 ಶಾಸಕ ಬಲದ ಗೋವಾ ವಿಧಾನಸಭೆಯಲ್ಲಿ ಸದ್ಯ ಎಎಪಿಯ ಇಬ್ಬರು ಶಾಸಕರಿದ್ದಾರೆ. ಕಳೆದ ತಿಂಗಳಷ್ಟೇ ಎಎಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಮಿತ್‌ ಪಾಲೇಕರ್, ಪ್ರಭಾರ ಮುಖ್ಯಸ್ಥ ಶ್ರೀಕೃಷ್ಣ ಪರಬ್ ಮತ್ತು ಇತರೆ ಮೂವರು ಪದಾಧಿಕಾರಿಗಳು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಎಎಪಿಗೆ ಭಾರಿ ಹಿನ್ನಡೆ ಆಗಿತ್ತು.

ADVERTISEMENT

ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ 42 ಸ್ಥಾನಗಳ ಪೈಕಿ ಎಎಪಿ ಕೇವಲ ಒಂದು ಸ್ಥಾನ ಪಡೆದ ಕಾರಣ ಪಾಲೇಕರ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.