ADVERTISEMENT

ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವಂತೆ ಬಿಜೆಪಿಗೆ ಸವಾಲೆಸೆದ ಅರವಿಂದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 16:35 IST
Last Updated 4 ಫೆಬ್ರುವರಿ 2020, 16:35 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಚುನಾವಣೆಗೆ ಮೂರು ದಿನಗಳು ಬಾಕಿಯಿರುವಾಗಲೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿಗೆ ಸವಾಲೆಸೆದಿದ್ದು, ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿಯು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಮತ್ತು ಯಾರೊಂದಿಗಾದರೂ ನಾನು ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.

ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವ ಬಿಜೆಪಿಯನ್ನು ಟೀಕಿಸಿದ ಅವರು, ಒಂದು ವೇಳೆ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇದ್ದರೆ ಮತ್ತೊಂದು ಪತ್ರಿಕಾಗೋಷ್ಟಿಯನ್ನು ಕರೆಯುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅಮಿತ್ ಶಾ ಅವರು ದೆಹಲಿ ಜನತೆಯನ್ನು ಖಾಲಿ ಚೆಕ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ದೆಹಲಿಯ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಅಮಿತ್ ಶಾ ಹೇಳುತ್ತಾರೆ. ಆದರೆ ಬಿಜೆಪಿಗೆ ಮತ ನೀಡಬೇಕಾದರೆ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಜನರು ತಿಳಿಯಲು ಬಯಸುತ್ತಿದ್ದಾರೆ. ಅನಕ್ಷರಸ್ಥ ಮತ್ತು ಅಸಮರ್ಥ ವ್ಯಕ್ತಿಯ ಹೆಸರನ್ನು ಅಮಿತ್ ಶಾ ಹೆಸರಿಸಿದರೆ ಮತ್ತೇನು? ಅದು ದೆಹಲಿ ಜನತೆಗೆ ಮಾಡಿದ ದ್ರೋಹವಾಗುತ್ತದೆ ಎಂದು ದೂರಿದರು.

ADVERTISEMENT

ಅರವಿಂದ ಕೇಜ್ರಿವಾಲ್ ಮತ್ತು ಅಮಿತ್ ಶಾ ನಡುವೆ ನಡೆಯುತ್ತಿರುವ ಚುನಾವಣೆಯಂತೆ ಬಿಂಬಿತವಾಗುತ್ತಿರುವ ದೆಹಲಿ ಚುನಾವಣೆಯು ಫೆ. 8ರಂದು ನಡೆಯಲಿದ್ದು, ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇದುವರೆಗೂ ಘೋಷಿಸಿಲ್ಲ.

ಬಹುತೇಕ ಚುನಾವಣೆಗಳಲ್ಲಿ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೇ ಮತಯಾಚನೆ ಮಾಡುತ್ತದೆ. ಕೇಂದ್ರದ ಅಭಿವೃದ್ಧಿ ವಿಚಾರಗಳಿಂದಾಗಿಯೇ ಚುನಾವಣೆಯನ್ನು ಎದುರಿಸುತ್ತದೆ. ಕಳೆದ ಬಾರಿ ನಡೆದ ಉತ್ತರ ಪ್ರದೇಶದ ಚುನಾವಣೆ ವೇಳೆಯಲ್ಲಿಯೂ ರಾಜ್ಯದ ಮುಖ್ಯಮಂತ್ರಿ ಯಾರೆಂದುಫಲಿತಾಂಶ ಹೊರಬೀಳುವವರೆಗೂ ಘೋಷಿಸಿರಲಿಲ್ಲ. ಬಳಿಕ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.

ಈ ಕುರಿತು ಪದೇ ಪದೆ ಟೀಕಿಸುತ್ತಿರುವ ಕೇಜ್ರಿವಾಲ್ ಅವರು ಹೊಸ ವರ್ಷಕ್ಕೆ ಶುಭಾಶಯ ಕೋರುವ ಹಿನ್ನೆಲೆಯಲ್ಲಿ 7 ಜನ ಮುಖ್ಯಮಂತ್ರಿ ಅಭ್ಯರ್ಥಿಗಳಿರುವ ದೆಹಲಿ ಬಿಜೆಪಿಗೆ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದರು. ಮನೋಜ್ ತಿವಾರಿ, ಗೌತಮ್ ಗಂಭೀರ್, ವಿಜಯ್ ಗೋಯಲ್, ಹರ್ದೀಪ್ ಸಿಂಗ್ ಪುರಿ, ಹರ್ಷವರ್ಧನ್, ವಿಜೇಂದರ್ ಗುಪ್ತಾ ಮತ್ತು ಪರ್ವೇಶ್ ಸಾಹೀಬ್ ಸಿಂಗ್ ಅವರನ್ನು ಉಲ್ಲೇಖಿಸಿದ್ದರು.

ದೆಹಲಿಗೆ ಸಿಎಎ ಬೆಂಬಲಿಸುವ ಸರ್ಕಾರ ಬೇಕು: ಪ್ರಧಾನಿ ಮೋದಿ

ದೆಹಲಿಗೆ ಸಿಎಎ ಬೆಂಬಲಿಸುವ ಸರ್ಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

‘ರಾಷ್ಟ್ರದ ರಾಜಧಾನಿಗೆ ನಿರ್ದೇಶನಗಳನ್ನು ನೀಡುವಂಥ ಸರ್ಕಾರ ಬೇಕಿದೆ. ದೆಹಲಿ ಸರ್ಕಾರ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ. ಒಂದು ವೇಳೆ ದೆಹಲಿ ನಿವಾಸಿಗಳು ನಗರದ ಹೊರಗೆ ಕಾಯಿಲೆಪೀಡಿತರಾದರೆ ಎಎಪಿ ಸರ್ಕಾರದ ‘ಮೊಹಲ್ಲಾ ಕ್ಲಿನಿಕ್‌’ಗಳು ಅಲ್ಲಿ ಬಂದು ಕಾರ್ಯ ನಿರ್ವಹಿಸುತ್ತವೆಯೇ’ ಎಂದು ಮೋದಿ ದೆಹಲಿಯ ದ್ವಾರಕಾದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.

ಪೂರ್ವ ದೆಹಲಿಯ ಕರ್ಕಡೂಮಾ ಪ್ರದೇಶದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ‘ಎಎಪಿ ಸರ್ಕಾರ ದ್ವೇಷದ ರಾಜಕಾರಣವನ್ನು ಹೇಗೆ ಮಾಡಿದೆ ಎಂಬುದನ್ನು ದೆಹಲಿಯ ಜನರು ನೋಡಿದ್ದಾರೆ. ನಮ್ಮ ಮೇಲೆ ದಾಳಿ ಮಾಡುವ ಶತ್ರುಗಳಿಗೆ ಅವಕಾಶ ನೀಡುವ ಸರ್ಕಾರ ದೆಹಲಿಗೆ ಬೇಡ’ ಎಂದರು.

‘ಬಿಜೆಪಿಗೆ ಮತ ಚಲಾಯಿಸಿ, ಸಶಸ್ತ್ರ ಪಡೆಗಳನ್ನು ಅವಮಾನಿಸುವವರನ್ನು ಶಿಕ್ಷಿಸಿ’ ಎಂದು ಪ್ರಧಾನಿ ಮನವಿ ಮಾಡಿದರು.

ಬಿಜೆಪಿ, ಎಎಪಿ ವಿರುದ್ಧ ರಾಹುಲ್ ವಾಗ್ದಾಳಿ

ದೆಹಲಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಬಿಜೆಪಿ ಮತ್ತು ಎಎಪಿ ವಿರುದ್ದ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಮೋದಿ ಮತ್ತು ಕೇಜ್ರಿವಾಲ್ ಇಬ್ಬರಿಗೂ ಯುವಕರಿಗೆ ನಿರುದ್ಯೋಗ ಒದಗಿಸುವ ಬಗ್ಗೆ ಆಸಕ್ತಿಯಿಲ್ಲ’ ಎಂದು ಆರೋಪಿಸಿದರು.

‘ಎರಡೂ ಪಕ್ಷಗಳು ಸಮಾಜದಲ್ಲಿ ದ್ವೇಷವನ್ನು ಹರಡುವ ಗುರಿ ಹೊಂದಿವೆ. ಆದರೆ, ಕಾಂಗ್ರೆಸ್ ಮಾತ್ರ ಎಂದಿಗೂ ದ್ವೇಷ ಹರಡುವ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿಯವರು ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ, ಎಎಪಿಯವರು ಇಸ್ಲಾಂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಇಬ್ಬರಿಗೂ ಧರ್ಮಗಳ ಬಗ್ಗೆ ಜ್ಞಾನವಿಲ್ಲ. ಯಾವುದೇ ಧರ್ಮದಲ್ಲಿ ಮತ್ತೊಬ್ಬರ ಮೇಲೆ ದಾಳಿ ಮಾಡಿ ಎಂದು ಎಲ್ಲಿ ಬರೆದಿದೆ ಹೇಳಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.