ADVERTISEMENT

21ನೇ ವಯಸ್ಸಿನಲ್ಲೇ ಮೇಯರ್‌ ಸ್ಥಾನ!

ಪಿಟಿಐ
Published 28 ಡಿಸೆಂಬರ್ 2020, 16:03 IST
Last Updated 28 ಡಿಸೆಂಬರ್ 2020, 16:03 IST
ಆರ್ಯ ರಾಜೇಂದ್ರನ್‌
ಆರ್ಯ ರಾಜೇಂದ್ರನ್‌   

ತಿರುವನಂತಪುರ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್‌ ಆಗಿ 21 ವರ್ಷದ ಆರ್ಯ ರಾಜೇಂದ್ರನ್‌ ಆಯ್ಕೆಯಾಗಿದ್ದು, ಅತಿ ಕಡಿಮೆ ವಯಸ್ಸಿನಲ್ಲೇ ಈ ಹುದ್ದೆಗೇರಿದ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

ಮೇಯರ್‌ ಹುದ್ದೆಗೆ ಸೋಮವಾರ ನಡೆದ ಚುನಾವಣೆ ವೇಳೆ ತ್ರಿಕೋನ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿರುವ, ಸಿಪಿಐ–ಎಂ ಸದಸ್ಯೆ ಆರ್ಯ ಗೆದ್ದಿದ್ದು, ಪ್ರಮಾಣವಚನ ಸ್ವೀಕರಿಸಿದರು. 100 ಸದಸ್ಯರ ಪಾಲಿಕೆಯಲ್ಲಿ ಮೇಯರ್‌ ಗದ್ದುಗೆ ಹಿಡಿಯಲು, ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಡಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಇದರಲ್ಲಿ ಪಕ್ಷೇತರ ಅಭ್ಯರ್ಥಿಗಳ ಮತ ಸೇರಿದಂತೆ 54 ಮತಗಳನ್ನು ಆರ್ಯ ಪಡೆದರು.

ಆರ್ಯ ಅವರಿಗೆ ನಟ, ರಾಜಕಾರಣಿ ಕಮಲಹಾಸನ್‌ ಹಾಗೂ ಅದಾನಿ ಗ್ರೂಪ್‌ನ ಗೌತಮ್‌ ಅದಾನಿ ಅವರು ಅಭಿನಂದಿಸಿದ್ದಾರೆ. ‘ಭಾರತದ ಯುವ ಮೇಯರ್‌ಗೆ ಅಭಿನಂದನೆ. ಯುವ ರಾಜಕೀಯ ನಾಯಕರು ರಾಜಕೀಯ ಪಥವನ್ನು ಹೇಗೆ ನಿರ್ಮಿಸುತ್ತಾರೆ ಹಾಗೂ ಇತರರು ತಮ್ಮನ್ನು ಹಿಂಬಾಲಿಸುವಂತೆ ಮಾಡುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ. ಇಂಕ್ರೆಡಿಬಲ್‌ ಇಂಡಿಯಾ!’ ಎಂದು ಅದಾನಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬಿಎಸ್‌ಸಿ ಗಣಿತಶಾಸ್ತ್ರ ವಿದ್ಯಾರ್ಥಿನಿಯಾಗಿರುವ ಆರ್ಯ, ನಗರದ ಮುದವನಮುಗಲ್‌ ವಾರ್ಡ್‌ನಿಂದ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಸಿಪಿಐ–ಎಂ ನೇತೃತ್ವದ ಎಲ್‌ಡಿಎಫ್‌ 51 ಸ್ಥಾನಗಳನ್ನು, ಬಿಜೆಪಿ 34 ಸ್ಥಾನಗಳನ್ನು ಹಾಗೂ ಯುಡಿಎಫ್‌ 10 ಸ್ಥಾನ ಮತ್ತು ಪಕ್ಷೇತರರು ಐದು ಸ್ಥಾನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.