ADVERTISEMENT

ಆರ್ಯನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ಜೈಲಿನಲ್ಲೇ ಮತ್ತೊಂದು ದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 13:03 IST
Last Updated 27 ಅಕ್ಟೋಬರ್ 2021, 13:03 IST
ಆರ್ಯನ್‌ ಖಾನ್‌
ಆರ್ಯನ್‌ ಖಾನ್‌    

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್‌ ಖಾನ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮತ್ತೆ ಮುಂದೂಡಿದೆ.

ಆರ್ಯನ್‌ ಖಾನ್‌ ಪರ ಭಾರತದ ಮಾಜಿ ಅಟಾರ್ನಿ ಜನರಲ್‌, ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದರು. ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಇಂದು ನ್ಯಾಯಾಲಯವು ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.

'ಸಿಆರ್‌ಪಿಸಿಯ ಸೆಕ್ಷನ್‌ 50ಕ್ಕಿಂತಲೂ ಸಂವಿಧಾನದ ಅನುಚ್ಛೇದ 22 ಮುಖ್ಯವಾಗುತ್ತದೆ. ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬುದನ್ನು ತಿಳಿಸದೆಯೇ ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆಯುವಂತಿಲ್ಲ. ಹಾಗೇ ವ್ಯಕ್ತಿಯು ತನ್ನ ಆಯ್ಕೆಯ ವಕೀಲರನ್ನು ಸಂಪರ್ಕಿಸುವ ಹಕ್ಕಿರುತ್ತದೆ' ಎಂದು ರೋಹಟಗಿ ಪ್ರಸ್ತಾಪಿಸಿದರು.

ADVERTISEMENT

ನಾಳೆ ಮಧ್ಯಾಹ್ನ 3ಕ್ಕೆ ವಿಚಾರಣೆ ನಿಗದಿಯಾಗಿದ್ದು, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಕುಮಾರ್‌ ಸಿಂಗ್‌ ಅವರು ಎನ್‌ಸಿಬಿ ಪರ ವಾದ ಮಂಡಿಸಲಿದ್ದಾರೆ.

ಆರೋಪಿ ಅರ್ಬಾಜ್‌ ಮರ್ಚಂಟ್‌ ಪರ ಅಮಿತ್‌ ದೇಸಾಯಿ ವಾದ ಮಂಡಿಸಿದರು. 'ಈ ಪ್ರಕರಣಕ್ಕೂ ವಾಟ್ಸ್‌ಆ್ಯಪ್‌ ಚಾಟ್‌ಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. ಹೆಣೆಯಲಾಗಿರುವ ಸಂಚಿಗೆ ಅದು ಪೂರಕವಾಗಿಲ್ಲ. ನಾವೀಗ ಮಾಧ್ಯಮಗಳ ವಿಚಾರಣೆಯನ್ನು ಎದುರಿಸುತ್ತಿದ್ದೇವೆ' ಎಂದು ಕೋರ್ಟ್‌ಗೆ ತಿಳಿಸಿದರು.

ಮುಂಬೈನಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 2ರಂದು ಆರ್ಯನ್ ಖಾನ್‌ ಅವರನ್ನು ಎನ್‌ಸಿಬಿ ವಶಕ್ಕೆ ಪಡೆದಿತ್ತು. ಸದ್ಯ ಅವರು ಜೈಲುವಾಸದಲ್ಲಿ ಇದ್ದಾರೆ.

ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಮನೀಶ್‌ ರಾಜ್‌ಗರಿಯಾ ಮತ್ತು ಅವಿನ್‌ ಸಾಹು ಅವರಿಗೆ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ನೀಡಿತ್ತು. ವಿಶೇಷ ನ್ಯಾಯಾಲಯದಲ್ಲಿ ಜಾಮೀನು ದೊರೆಯದ ಹಿನ್ನೆಲೆಯಲ್ಲಿ ಆರ್ಯನ್‌ ಖಾನ್‌ ಅವರು ಬಾಂಬೆ ಹೈಕೋರ್ಟ್‌ ಮೊರೆಹೋಗಿದ್ದಾರೆ.

ಈವರೆಗೂ ಪ್ರಕರಣದಲ್ಲಿ ನೈಜೀರಿಯಾದ ಇಬ್ಬರು ಸೇರಿದಂತೆ ಒಟ್ಟು 20 ಜನರನ್ನು ಎನ್‌ಸಿಬಿ ಬಂಧಿಸಿದೆ.

ಪ್ರಕರಣದಲ್ಲಿ ಸಾಕ್ಷಿದಾರನಾಗಿರುವ ಪ್ರಭಾಕರ್‌ ಸೈಲ್‌, ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಆರ್ಯನ್‌ ಖಾನ್‌ ಬಿಡುಗಡೆ ₹25 ಕೋಟಿ ಡೀಲ್‌ ನಡೆದಿತ್ತು ಎಂದಿದ್ದರು.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.