ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಎಐಎಂಐಎಂ

ಪಿಟಿಐ
Published 27 ಜೂನ್ 2021, 12:59 IST
Last Updated 27 ಜೂನ್ 2021, 12:59 IST
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ    

ಹೈದರಾಬಾದ್: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 'ಉತ್ತಮ ಸಾಧನೆ' ತೋರಿದ ಬಳಿಕ 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಯೂ 100 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ಭಾನುವಾರ ಪ್ರಕಟಿಸಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮತ್ತು ಭಾಗಿದಾರಿ ಸಂಕಲ್ಪ ಮೋರ್ಚಾದೊಂದಿಗೆ ಮೈತ್ರಿಯೊಂದಿಗೆ ಸ್ಪರ್ಧಿಸುವುದಾಗಿ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಂದೇಶಗಳನ್ನು ಯಾವಾಗಲೂ ಇಂಗ್ಲೀಷ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಓವೈಸಿ ಇಂದು ಹಿಂದಿಯಲ್ಲಿ ಟ್ವೀಟ್ ಮಾಡಿ, ತಮ್ಮ ಪಕ್ಷವು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ADVERTISEMENT

'ಉತ್ತರ ಪ್ರದೇಶ ಚುನಾವಣೆಗೆ ಸಂಬಂಧಿಸಿದಂತೆ ನಾವು ಅಭ್ಯರ್ಥಿಗಳನ್ನು 100 ಸ್ಥಾನಗಳಿಗೆ ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಪಕ್ಷವು ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಅಭ್ಯರ್ಥಿ ಅಥವಾ ಆಕಾಂಕ್ಷಿಗಳ ಅರ್ಜಿ ನಮೂನೆಗಳನ್ನು ಸಹ ಬಿಡುಗಡೆ ಮಾಡಿದೆ' ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ನಾವು 'ಭಾಗಿದಾರಿ ಸಂಕಲ್ಪ್ ಮೋರ್ಚಾ'ದೊಂದಿಗೆ ಇದ್ದೇವೆ. ಚುನಾವಣೆ ಅಥವಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ಬೇರೆ ಯಾವುದೇ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ' ಎಂದು ಹೇಳಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ, ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.