ADVERTISEMENT

ಹೇಳಿಕೆ ನೀಡುವ ಮುನ್ನ ವಾಸ್ತವ ತಿಳಿಯಿರಿ: ವಿದೇಶಿ ಗಣ್ಯರಿಗೆ ವಿದೇಶಾಂಗ ಸಚಿವಾಲಯ

ಪಿಟಿಐ
Published 3 ಫೆಬ್ರುವರಿ 2021, 10:55 IST
Last Updated 3 ಫೆಬ್ರುವರಿ 2021, 10:55 IST
ರೈತರ ಪ್ರತಿಭಟನೆ – ಪಿಟಿಐ ಚಿತ್ರ
ರೈತರ ಪ್ರತಿಭಟನೆ – ಪಿಟಿಐ ಚಿತ್ರ   

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿ ಹೇಳಿಕೆಗಳನ್ನು ನೀಡುವ ಮುನ್ನ ವಾಸ್ತವ ಏನೆಂಬುದನ್ನು ತಿಳಿಯಿರಿ ಎಂದು ಪಾಪ್ ಗಾಯಕಿ ರಿಹಾನ್ನಾ, ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಸೇರಿದಂತೆ ವಿದೇಶಿ ಗಣ್ಯರಿಗೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.

ದೇಶದ ಕೆಲವು ಭಾಗದ ರೈತರ ಸಣ್ಣ ವರ್ಗವೊಂದು ಕೃಷಿ ಸುಧಾರಣೆ ಕಾನೂನುಗಳ ಬಗ್ಗೆ ಕೆಲವು ಭಿನ್ನಾಭಿಪ್ರಾಯ ಹೊಂದಿದೆ. ರೈತರ ಪ್ರತಿಭಟನೆಯ ಬಗ್ಗೆ ಹೇಳಿಕೆ ನೀಡುವ ಮುನ್ನ ಆ ಕುರಿತು ಸರಿಯಾದ ತಿಳಿವಳಿಕೆ ಹೊಂದುವ ಅಗತ್ಯ ಇದೆ ಎಂದು ಸಚಿವಾಲಯ ಹೇಳಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಪ್ರಚೋದನಾಕಾರಿ ಹೇಳಿಕೆಗಳು, ಹ್ಯಾಷ್‌ಟ್ಯಾಗ್‌ಗಳು ಜವಾಬ್ದಾರಿಯಿಂದ ಕೂಡಿರುವುದಿಲ್ಲ. ವಿಶೇಷವಾಗಿ ಸೆಲೆಬ್ರಿಟಿಗಳು ಈ ರೀತಿ ಮಾಡಿದಾಗ’ ಎಂದು ಸಚಿವಾಲಯ ಹೇಳಿದೆ.

ರೈತರ ಪ್ರತಿಭಟನೆಗೆ ಸಂಬಂಧಿಸಿ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ, ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕೆಲವು ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಹಾಗೂ ಲೇಖಕಿ ಮೀನಾ ಹ್ಯಾರಿಸ್ ಸಹ ರೈತರ ಪ್ರತಿಭಟನೆ ಬಗ್ಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.

ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದ ಶಾಸನವನ್ನು ಭಾರತದ ಸಂಸತ್ತು ಅಂಗೀಕರಿಸಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ಭಾರತದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವನ್ನು ಎತ್ತಿಕಟ್ಟಲು ಪ್ರಯತ್ನಿಸಿವೆ ಎಂದು ಸಚಿವಾಲಯ ಹೇಳಿದೆ.

‘ಈ ಪ್ರತಿಭಟನೆಗಳನ್ನು ಭಾರತದ ಪ್ರಜಾಪ್ರಭುತ್ವ ನೀತಿಗಳು ಮತ್ತು ರಾಜಕೀಯದ ಹಿನ್ನೆಲೆಯಲ್ಲಿ ನೋಡಬೇಕು. ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಸಂಬಂಧಪಟ್ಟ ರೈತ ಗುಂಪುಗಳು ಪ್ರಯತ್ನಿಸಿವೆ ಎಂಬುದನ್ನು ಒತ್ತಿಹೇಳಲು ಬಯಸುತ್ತೇವೆ’ ಎಂದೂ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.