ADVERTISEMENT

ಕೊರೊನಿಲ್‌ ಔಷಧ: ಆಯುಷ್‌ ಸಚಿವಾಲಯಕ್ಕೆ ವರದಿ ನೀಡಿದ ‍ಪತಂಜಲಿ

ಪಿಟಿಐ
Published 24 ಜೂನ್ 2020, 16:29 IST
Last Updated 24 ಜೂನ್ 2020, 16:29 IST
ಬಾಬಾ  ರಾಮದೇವ್
ಬಾಬಾ ರಾಮದೇವ್    

ಪಣಜಿ: ‘ಕೊರೊನಿಲ್‌’ ಹಾಗೂ ‘ಸ್ವಸರಿ’ ಹೆಸರಿನ ಎರಡು ಔಷಧಗಳ ಬಗ್ಗೆ ಆಯುಷ್‌ ಸಚಿವಾಲಯಕ್ಕೆ ಪತಂಜಲಿ ಆಯುರ್ವೇದ ಕಂಪನಿ ವರದಿ ನೀಡಿದೆ ಎಂದು ಕೇಂದ್ರ ಆಯುಷ್‌ ಸಚಿವ ಶ್ರೀಪಾದ್‌ ನಾಯಕ್‌ ಬುಧವಾರ ತಿಳಿಸಿದರು.

ಕೋವಿಡ್‌–19 ಗುಣಪಡಿಸುವ ಔಷಧಿ ಎಂದು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಆಯುರ್ವೇದ ಕಂಪನಿಯು ಮಂಗಳವಾರ ಕೊರೊನಿಲ್‌ ಹಾಗೂ ಸ್ವಸರಿ ಎಂಬ ಔಷಧವನ್ನು ಬಿಡುಗಡೆಗೊಳಿಸಿ,ಜಾಹೀರಾತು ನೀಡಿತ್ತು. ಇದರ ಬೆನ್ನಲ್ಲೇಈ ಕುರಿತು ಕಂಪನಿಗೆ ನೋಟಿಸ್‌ ನೀಡಿದ್ದ ಆಯುಷ್‌ ಇಲಾಖೆ, ‘ಈ ಔಷಧಿ ಕುರಿತ ವಿವರ ಹಾಗೂ ವೈಜ್ಞಾನಿಕ ಅಧ್ಯಯನದ ಮಾಹಿತಿ ತನ್ನ ಬಳಿ ಇಲ್ಲ’ ಎಂದು ಹೇಳಿತ್ತು. ಅಲ್ಲದೆ ಈ ಔಷಧದ ಪ್ರಯೋಗ ನಡೆದ ಆಸ್ಪತ್ರೆ, ಸ್ಥಳ, ಬಳಸಲಾದ ಔಷಧದ ಪ್ರಮಾಣ ಕುರಿತ ವಿವರಗಳನ್ನು ಆದಷ್ಟು ಶೀಘ್ರ ಒದಗಿಸಬೇಕು. ಅಲ್ಲಿಯವರೆಗೂ ಯಾವುದೇ ಜಾಹೀರಾತುಗಳನ್ನು ನೀಡಬಾರದು ಎಂದೂ ಸೂಚಿಸಿತ್ತು.

‘ಕಂಪನಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ, ಔಷಧಕ್ಕೆ ಅಂತಿಮ ಒಪ್ಪಿಗೆ ನೀಡಬೇಕೇ ಎನ್ನುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಬಾಬಾ ರಾಮ್‌ದೇವ್‌ ಹೊಸ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಒಳ್ಳೆಯದೇ, ಆದರೆ ಅದೇನೇ ಸಂಶೋಧನೆ ಆಗಿರಲಿ, ಅದು ಆಯುಷ್‌ ಇಲಾಖೆಯ ಅನುಮತಿ ಪಡೆಯಲೇಬೇಕು’ ಎಂದು ಸಚಿವರು ತಿಳಿಸಿದರು.

ADVERTISEMENT

ಕಂಪನಿಗೆ ನೋಟಿಸ್‌?:

ಜ್ವರ ಮತ್ತು ಕೆಮ್ಮಿನ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ತಯಾರಿಕೆಗೆ ಅನುಮತಿ ಪಡೆದು, ಕೋವಿಡ್‌ ಗುಣಪಡಿಸುವ ಹೆಸರಿನಲ್ಲಿ ಔಷಧ ಸಿದ್ಧಪಡಿಸಿರುವುದಕ್ಕೆಉತ್ತರಾಖಂಡ ಸರ್ಕಾರ ಪತಂಜಲಿ ಕಂಪನಿಗೆ ನೋಟಿಸ್‌ ನೀಡಲು ನಿರ್ಧರಿಸಿದೆ.

50 ಕಂಪನಿಗಳ ವಿರುದ್ಧ ಕ್ರಮಕ್ಕೆ ದೂರು(ಮುಂಬೈ ವರದಿ): ಕೋವಿಡ್‌–19 ಗುಣಪಡಿಸುವ ಔಷಧ ಎಂದುಏಪ್ರಿಲ್‌ ತಿಂಗಳೊಂದರಲ್ಲೇ 50 ಆಯುರ್ವೇದ ಮತ್ತು ಹೋಮಿಯೋಪಥಿ ಔಷಧ ತಯಾರಕರು ಜಾಹೀರಾತು ನೀಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಮಾಹಿತಿ ಒದಗಿಸಲಾಗಿದೆಎಂದು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಎಎಸ್‌ಸಿಐ) ತಿಳಿಸಿದೆ.

ಈ ಜಾಹೀರಾತುಗಳು ಎಲ್ಲ ರೀತಿಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, 2020 ಏಪ್ರಿಲ್‌ 1ರಂದು ಆಯುಷ್‌ ಸಚಿವಾಲಯ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸುತ್ತಿವೆ ಎಂದು ಎಎಸ್‌ಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ರಾಮ್‌ದೇವ್ ವಿರುದ್ಧ ದೂರು:

ಮುಜಾಫ್ಫರ್‌ಪುರ: ಕೋವಿಡ್‌–19 ಗುಣಪಡಿಸಲು ಇರುವ ಔಷಧ ಅಭಿವೃದ್ಧಿಪಡಿಸಿದ್ದೇವೆ ಎಂದು ಲಕ್ಷಾಂತರ ಜನರ ಜೀವವನ್ನು ಅಪಾಯಕ್ಕೆ ದೂಡಿದ್ದಾರೆ ಎಂದು ಆರೋಪಿಸಿ ಯೋಗಗುರು ರಾಮ್‌ದೇವ್‌ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ‌

ಮೋಸ, ಕ್ರಿಮಿನಲ್‌ ಸಂಚು ಆರೋಪದಡಿ ಎಫ್‌ಐಆರ್‌ ದಾಖಲಿಸಬೇಕು ಎಂದುಸಾಮಾಜಿಕ ಕಾರ್ಯಕರ್ತರಾದ ತಮನ್ನ ಹಶ್ಮಿ ಅವರು ದೂರಿನಲ್ಲಿ ಕೋರಿದ್ದಾರೆ. ಜೂನ್‌ 30ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.