ADVERTISEMENT

ಪೈಲಟ್‌ ಹೊರಗಿನವರೆಂದು ಗೆಹ್ಲೋಟ್‌ ಬಣದ ಮೂದಲಿಕೆ: ಕೈ ನಾಯಕನ ಬೆಂಬಲಕ್ಕೆ ಬಿಜೆಪಿ

ಪಿಟಿಐ
Published 24 ಜೂನ್ 2021, 2:41 IST
Last Updated 24 ಜೂನ್ 2021, 2:41 IST
ಸಮಾವೇಶವೊಂದರಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ (ಪಿಟಿಐ)
ಸಮಾವೇಶವೊಂದರಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ (ಪಿಟಿಐ)   

ಜೈಪುರ: ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರನ್ನು ‘ಹೊರಗಿನವ’ರು ಎಂದು ಮೂದಲಿಸಲಾಗಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬಣದ ಪಕ್ಷೇತರ ಶಾಸಕ ರಾಮಕೇಶ್‌ ಮೀನಾ ಅವರ ಈ ಹೇಳಿಕೆಯನ್ನು ಪೈಲಟ್‌ ನಿಷ್ಠ ಶಾಸಕರು ಮತ್ತು ಬಿಜೆಪಿ ಖಂಡಿಸಿದೆ.

ಸಚಿನ್‌ ಪೈಲಟ್‌ ರಾಜಸ್ಥಾನಕ್ಕೆ ಹೊರಗಿನವರು ಎಂದು ರಾಮಕೇಶ್ ಮೀನಾ ಅವರು ಮಂಗಳವಾರ ಹೇಳಿದ್ದರು.

ತಮ್ಮ ನಾಯಕನ ರಕ್ಷಣೆಗೆ ಧಾವಿಸಿರುವ ಕಾಂಗ್ರೆಸ್‌ನ ಶಾಸಕ ಇಂದ್ರಜ್‌ ಮೀನಾ, ‘ಪೈಲಟ್‌ ತೂಕದ ನಾಯಕ. ಬಲಶಾಲಿಯ ವಿರುದ್ಧದ ಇಂಥ ಆರೋಪಗಳು ಸಹಜ,‘ ಎಂದು ಹೇಳಿದ್ದಾರೆ

ADVERTISEMENT

ರಾಮಕೇಶ್ ಮೀನಾ ಅವರ ಹೇಳಿಕೆಯನ್ನು ವಿರೋಧ ಪಕ್ಷದ ಬಿಜೆಪಿಯೂ ಖಂಡಿಸಿದೆ. ಗೆಹ್ಲೋಟ್ ಬಣದ ಮೇಲೆ ದಾಳಿ ನಡೆಸಿದೆ. ‘ಪೈಲಟ್ ಹೊರಗಿನವರಾದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಭಾರತದಲ್ಲಿ ಜನಿಸದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏನು,’ ಎಂದು ಪ್ರಶ್ನೆ ಮಾಡಿದೆ.

‘ರಾಮಕೇಶ್ ಮೀನಾ ಮುಖ್ಯಮಂತ್ರಿಗೆ ಹತ್ತಿರವಾಗಿದ್ದಾರೆ. ಪೈಲಟ್‌ ವಿರುದ್ಧದ ಮೀನಾ ಹೇಳಿಕೆಯು ವಾಸ್ತವದಲ್ಲಿ ಗೆಹ್ಲೋಟ್ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಿಂಬಿಸುತ್ತಿದೆ,‘ ಎಂದು ಬಿಜೆಪಿ ಶಾಸಕ ಮತ್ತು ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಹೇಳಿದ್ದಾರೆ.

‘ಕಾಂಗ್ರೆಸ್‌ನ ಪ್ರಭಾವಿ ನಾಯಕ ಮತ್ತು ರಾಜಸ್ಥಾನದ ರಾಜ್ಯಸಭಾ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಕೇರಳ ಮೂಲದವರು. ಹೀಗಾಗಿ ಅವರೂ ರಾಜಸ್ಥಾನಕ್ಕೆ ಹೊರಗಿನವರು,’ ಎಂದು ರಾಥೋಡ್ ಹೇಳಿದ್ದಾರೆ.

ವೇಣುಗೋಪಾಲ್‌ ಅವರು 2020ರ ಜೂನ್‌ನಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.