ADVERTISEMENT

ಕಾಂಗ್ರೆಸ್‌ ತೊರೆದ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌

ಪಿಟಿಐ
Published 15 ಫೆಬ್ರುವರಿ 2022, 9:36 IST
Last Updated 15 ಫೆಬ್ರುವರಿ 2022, 9:36 IST
ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌
ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌   

ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್‌ ಅವರು ಮಂಗಳವಾರ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್‌ ಜೊತೆಗಿನ 46 ವರ್ಷಗಳ ಸುದೀರ್ಘ ನಂಟನ್ನು ಕೊನೆಗೊಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಂದು ಬೆಳಿಗ್ಗೆ ಅಶ್ವನಿ ಕುಮಾರ್‌ ರಾಜೀನಾಮೆ ಪತ್ರವನ್ನು ರವಾನಿಸಿದರು.

'ಪ್ರಸಕ್ತ ಸನ್ನಿವೇಶದಲ್ಲಿ ನಾನು ಪಕ್ಷದ ಹೊರಗೆ ನಿಂತು ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನೆರವಾಗುತ್ತೇನೆ. ಸುದೀರ್ಘ 46 ವರ್ಷಗಳ ಒಡನಾಟದ ನಂತರ ನಾನು ಪಕ್ಷ ತೊರೆಯುತ್ತಿದ್ದೇನೆ,...' ಎಂದು ರಾಜೀನಾಮೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ADVERTISEMENT

ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ನಡುವೆ ಅಶ್ವನಿ ಕುಮಾರ್‌ ಅವರು ಪಕ್ಷ ತೊರೆದಿದ್ದಾರೆ. ಇದೇ 20ರಂದು ಪಂಜಾಬ್‌ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇತ್ತೀಚೆಗಷ್ಟೇ ಕೇಂದ್ರದ ಮಾಜಿ ಸಚಿವ ಆರ್‌.ಪಿ.ಎನ್‌.ಸಿಂಗ್‌ ಸಹ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಜ್ಯೋತಿರಾದಿತ್ಯ ಸಿಂದಿಯಾ, ಜಿತಿನ್‌ ಪ್ರಸಾದ. ಸುಷ್ಮಿತಾ ದೇವ್‌ ಹಾಗೂ ಲೂಯಿಜಿನ್ಹೊ ಫಲೈರೊ ಸೇರಿದಂತೆ ಹಲವು ಮುಖಂಡರು ಈ ಹಿಂದೆ ಕಾಂಗ್ರೆಸ್‌ನಿಂದ ಹೊರ ಬಂದಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಅಶ್ವನಿ ಕುಮಾರ್‌ ಅವರು ಕಾನೂನು ಸಚಿವ, ಕೇಂದ್ರದ ಕೈಗಾರಿಕಾ ನೀತಿ ಇಲಾಖೆಯ ರಾಜ್ಯ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 1991ರಲ್ಲಿ ಅವರನ್ನು ಭಾರತದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.