ADVERTISEMENT

ತಾಜ್‌ ಮಹಲ್‌: ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಲು ಎಎಸ್‌ಐಗೆ ನೋಟಿಸ್‌

ಪಿಟಿಐ
Published 20 ಡಿಸೆಂಬರ್ 2022, 13:38 IST
Last Updated 20 ಡಿಸೆಂಬರ್ 2022, 13:38 IST
ತಾಜ್‌ ಮಹಲ್ 
ತಾಜ್‌ ಮಹಲ್    

ಆಗ್ರಾ (ಪಿಟಿಐ): ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಸ್ಮಾರಕವನ್ನು ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆಗೆ ಸುಮಾರು ₹ 1.94 ಕೋಟಿ ನೀರಿನ ಶುಲ್ಕ, ₹ 1.47 ಲಕ್ಷ ಆಸ್ತಿ ತೆರಿಗೆ ಮತ್ತು ಆಗ್ರಾ ಕೋಟೆಗೆ ಸಂಬಂಧಿಸಿದಂತೆ ಸೇವಾ ಶುಲ್ಕವಾಗಿ ₹ 5 ಕೋಟಿ ಪಾವತಿಸುವಂತೆ ಸ್ಥಳೀಯ ಪ್ರಾಧಿಕಾರಗಳು ನೋಟಿಸ್‌ ನೀಡಿವೆ.

ಅಲ್ಲದೆ ಆಗ್ರಾದ ಮತ್ತೊಂದು ಪ್ರಸಿದ್ಧ ಸ್ಮಾರಕವಾದ ಇತ್ಮದ್-ಉದ್-ದೌಲಾ ಸಮಾಧಿಗೆ ₹ 1.40 ಲಕ್ಷ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ.

ಆಗ್ರಾದ ಮಹಾನಗರ ಪಾಲಿಕೆ ಮತ್ತು ಆಗ್ರಾದ ಕಂಟೋನ್ಮೆಂಟ್‌ ಮಂಡಳಿ ಈ ಕುರಿತು ನೋಟಿಸ್‌ಗಳನ್ನು ಎಎಸ್‌ಐಗೆ ರವಾನಿಸಿದೆ. ಆರ್ಥಿಕ ವರ್ಷ 2021– 22 ಮತ್ತು 2022– 23ಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದ್ದು, 15 ದಿನಗಳೊಳಗೆ ಪಾವತಿಸುವಂತೆ ಸೂಚಿಸಲಾಗಿದೆ.

ADVERTISEMENT

ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವ ಎಎಸ್‌ಐ ಆಗ್ರಾ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್, ‘ತಾಜ್‌ ಮಹಲ್‌,ಇತ್ಮದ್- ಉದ್- ದೌಲಾ ಸಮಾಧಿಗಳು ರಾಷ್ಟ್ರೀಯ ಸ್ಮಾರಕಗಳಾಗಿದ್ದು, ಅವುಗಳಿಗೆ ಈ ರೀತಿಯ ತೆರಿಗೆಗಳಿಂದ ವಿನಾಯಿತಿಯಿದೆ’ ಎಂದು ಹೇಳಿದ್ದಾರೆ.

‘ಎಎಸ್‌ಐ ದೇಶದಾದ್ಯಂತ ಸುಮಾರು 4,000 ಸ್ಮಾರಕಗಳನ್ನು ನೋಡಿಕೊಳ್ಳುತ್ತಿದ್ದು, ಎಲ್ಲೂ ಈ ರೀತಿಯ ಪಾವತಿಗಳನ್ನು ಮಾಡಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಈ ನೋಟಿಸ್‌ಗಳಿಗೆ ಸಂಬಂಧಿಸಿದಂತೆ ನಾವು ಪ್ರತ್ಯುತ್ತರ ನೀಡಿದ್ದೇವೆ. ಜಿಎಸ್‌ಟಿ ಅಡಿಯಲ್ಲಿ ಸ್ಮಾರಕಗಳಿಗೆ ಯಾವುದೇ ಸೇವಾ ತೆರಿಗೆ ಅನ್ವಯಿಸುವುದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಭೌಗೋಳಿಕ ಮಾಹಿತಿ ಸಮೀಕ್ಷೆ (ಜಿಐಎಸ್) ಆಧರಿಸಿ ಮೊದಲ ಬಾರಿಗೆ ಕಟ್ಟಡಗಳ ಮೌಲ್ಯಮಾಪನ ಪ್ರಕ್ರಿಯೆ ಮಾಡಲಾಗಿದೆ. ಅದರಂತೆ ತಾಜ್ ಮಹಲ್ ಮತ್ತು ಇತ್ಮದ್- ಉದ್- ದೌಲಾ ಸಮಾಧಿ ನಿರ್ವಹಿಸುತ್ತಿರುವ ಎಎಸ್ಐಗೆ ನೋಟಿಸ್ ನೀಡಲಾಗಿದೆ. ಅದೇ ರೀತಿ ಸರ್ಕಾರಿ, ಖಾಸಗಿ, ಧಾರ್ಮಿಕ ಕಟ್ಟಡಗಳಿಗೂ ನೋಟಿಸ್‌ ನೀಡಲಾಗಿದೆ. ಯಾವುದೇ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ಅನ್ವಯ ಆಗುವಂತಿದ್ದರೆ, ಅದನ್ನು ಪಾಲಿಸುವುದಾಗಿ’ ಆಗ್ರಾ ಮಹಾನಗರ ಪಾಲಿಕೆ ಆಯುಕ್ತ ನಿಖಿಲ್ ಟಿಕಾರಾಂ ಫಂಡೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.