ADVERTISEMENT

ಅಸ್ಸಾಂ: ಸೀಟು ಹಂಚಿಕೆ ಒಪ್ಪಂದ ಅಂತಿಮ; ಮುಖ್ಯಮಂತ್ರಿ ಶರ್ಮಾ 

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 15:33 IST
Last Updated 22 ಫೆಬ್ರುವರಿ 2026, 15:33 IST
Himanta Biswa Sarma 
Himanta Biswa Sarma    

ಗುವಾಹಟಿ: ‘ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಮೈತ್ರಿಕೂಟದ ನಡುವಿನ ಸೀಟು ಹಂಚಿಕೆ ಆತಂರಿಕ ಒಪ್ಪಂದ ಅಂತಿಮಗೊಂಡಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಅಸ್ಸಾಂ ಗಣ ಪರಿಷದ್ (ಎಜಿಪಿ), ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ (ಯುಪಿಪಿಎಲ್‌) ಮತ್ತು ಬೊಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ರಭಾ ಹಾಸೊಂಗ್‌ ಜೊಥಾ ಸಂಗ್ರಾಮ್‌ ಸಮಿತಿ (ಆರ್‌ಎಚ್‌ಜೆಎಸ್‌ಎಸ್‌) ಮತ್ತು ಜನಶಕ್ತಿ ಪಾರ್ಟಿ (ಜಪಿ) ಮೈತ್ರಿಕೂಟದ ಭಾಗವಾಗಿದ್ದರೂ, ಈ ಎರಡೂ ಪಕ್ಷಗಳಿಂದ ಯಾರೂ ಶಾಸಕರಿಲ್ಲ. 

‘ಸೀಟು ಹಂಚಿಕೆ ಒಪ್ಪಂದ ಈಗಾಗಲೇ ಮುಗಿದಿದೆ. ಯಾರು ಎಲ್ಲಿ ಸ್ಪರ್ಧಿಸಬೇಕು ಎನ್ನುವುದು ನಮಗೆ ತಿಳಿದಿದೆ. ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲೇ ರಾಜ್ಯ ಮಟ್ಟದ ಮುಖಂಡರು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. 

ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್‌–ಏಪ‍್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. 2023ರಲ್ಲಿ ಕ್ಷೇತ್ರ ಮರು ವಿಂಗಡಣೆ ಆಗಿತ್ತು. ಆ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.  

ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 64, ಎಜಿಪಿ 9, ಯುಪಿಪಿಎಲ್‌ 7, ಬಿಪಿಎಫ್‌ 3 ಸದಸ್ಯ ಬಲ ಹೊಂದಿವೆ. ಕಾಂಗ್ರೆಸ್‌ನ 26 ಶಾಸಕರಿದ್ದರೆ, ಎಐಯುಡಿಎಫ್‌ 15 ಹಾಗೂ ಸಿಪಿಎಂ 1 ಸ್ಥಾನ ಹೊಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.