ಬೆಂಗಳೂರು: ಅಮೆರಿಕದ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಇಳಿದಿದ್ದಾರೆ ಎಂದು ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅರ್ಚಿತಾ ಫುಕಾನ್ ಕುರಿತು ಸುದ್ದಿ ಹರಿಯ ಬಿಟ್ಟಿದ್ದ ಮಾಜಿ ಗೆಳೆಯ ಪ್ರತಿಮ್ ಬೋರಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ‘ಬೇಬಿಡಾಲ್ ಅರ್ಚಿ’ ಎಂದು ಗುರುತಿಸಿಕೊಂಡಿರುವ ಅರ್ಚಿತಾ ಫುಕಾನ್ ಎಂಬ ಯುವತಿಯನ್ನೇ ಹೋಲುವ ಕೃತಕ ಬುದ್ಧಿಮತ್ತೆ ಬಳಸಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಖಾತೆ (Instagram/@babydoll_archi) ಸೃಷ್ಟಿಸಿ ಹರಿಯಬಿಟ್ಟಿದ್ದ ಆರೋಪವನ್ನು ಈತ ಎದುರಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಈತ, ‘ವರ್ಕ್ ಫ್ರಮ್ ಹೋಂ’ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಫುಕಾನ್ ಅವರ ಮಾಜಿ ಗೆಳೆಯನಾದ ತಿನ್‌ಸುಕಿಯಾ ಗ್ರಾಮದ ಪ್ರತಿಮ್ ಬೋರಾ ವಿರುದ್ಧ ಮಹಿಳೆಯ ಮಾನಹಾನಿ ಮಾಡಿದ ಮತ್ತು ಕಿರುಕುಳ ನೀಡಿದ ಆರೋಪಗಳಿವೆ. ಫುಕಾನ್ ಅವರ ಸೋದರ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ತಿನ್‌ಸುಕಿಯಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ದಿಬ್ರುಗಢ ಪೊಲೀಸರು ತಿಳಿಸಿದ್ದಾರೆ.
‘ಬೇಬಿಡಾಲ್ ಆರ್ಚಿ’ ಎಂದೇ ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಫುಕಾನ್ ಅವರ ಚಿತ್ರವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆ ತಂತ್ರಾಂಶ ಬಳಸಿ ಬೇರೆ ಚಿತ್ರಗಳನ್ನು ಈತ ಪಡೆದಿದ್ದ. ಇದರಲ್ಲಿ ಅಮೆರಿಕದ ನೀಲಿ ಚಿತ್ರ ತಾರೆ ಕೆಂಡ್ರಾ ಲಸ್ಟ್ ಅವರೊಂದಿಗಿನ ಚಿತ್ರವೂ ಇತ್ತು. ಇದಾದ ನಂತರ ಫುಕಾನ್ ಅವರ ಚಿತ್ರಗಳು ಮತ್ತು ಸುದ್ದಿ ವ್ಯಾಪಕವಾಗಿ ಹರಿದಾಡಿದವು. ಜತೆಗೆ ಇವರ ಹೆಸರು ಅತಿ ಹೆಚ್ಚು ಹುಡುಕಾಟಗೊಂಡ ಪಟ್ಟಿಗೆ ಸೇರಿತು.
‘ಇದು ಸುದ್ದಿಯಾಗುತ್ತಿದ್ದಂತೆ ಆರೋಪಿ ಬೋರಾ ತಲೆಮರೆಸಿಕೊಂಡಿದ್ದ. ಈತನ ಫೋನ್‌ನ ಐಪಿ ಅಡ್ರೆಸ್ ಲೊಕೇಷನ್ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಫೋನ್ ಮತ್ತು ಲ್ಯಾಪ್‌ಟಾಪ್ ವಶಕ್ಕೆ ಪಡೆದು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ’ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.
‘ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಬೋರಾ, ತನ್ನೊಂದಿಗೆ ಫುಕಾನ್ ಸಂಬಂಧ ಕಡಿದುಕೊಂಡಿದ್ದರಿಂದ ಕುಪಿತಗೊಂಡು ಈ ಕೆಲಸ ಮಾಡಿರುವುದಾಗಿ ಹೇಳಿದ್ದಾನೆ. ನಕಲಿ ಖಾತೆ ತೆರೆದು, ಆಕೆಯ ಚಿತ್ರಗಳನ್ನು ತಿರುಚಿ ಪ್ರಕಟಿಸಿದ್ದಾಗಿ ಒಪ್ಪಿಕೊಂಡಿದ್ದಾನೆ’ ಎಂದಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರತಿಮ್ ಬೋರಾ ವಿರುದ್ಧ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೈಬರ್ ಅಪರಾಧ, ಮಾನಹಾನಿ, ಗುರುತು ಮರೆಮಾಚಿದ್ದು, ಅಶ್ಲೀಲತೆ ಮತ್ತು ಖಾಸಗಿತನದ ಉಲ್ಲಂಘನೆ ಆರೋಪಗಳೂ ಈತನ ಮೇಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.