
ನವದೆಹಲಿ: ಜಾಲತಾಣಗಳಲ್ಲಿ ದೇಶ ವಿರೋಧಿ ಮತ್ತು ಅಶ್ಲೀಲ ಪೋಸ್ಟ್ ಹಂಚಿಕೊಂಡ ಕಾರಣ ಅಸ್ಸಾಂನ ಕಾಲೇಜು ಪ್ರಾಧ್ಯಾಪಕನನ್ನು ಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ಆತ ಯುವತಿಯರಿಗೆ ಬೆದರಿಕೆ’, ‘ವಿಕೃತಕಾಮಿ’. ಅಂಥವರು ಶೈಕ್ಷಣಿಕ ಸಂಸ್ಥೆಗಳನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಚಾಟಿ ಬೀಸಿತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ನೇತೃತ್ವದ ನ್ಯಾಯಪೀಠವು, ಪ್ರೊ.ಎಂ.ಡಿ.ಆಬೆದೀನ್ ಅವರಿಗೆ ಜಾಮೀನು ನಿರಾಕರಿಸಿತು.
‘ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಮತ್ತು ಅಶ್ಲೀಲವಾಗಿ ಮಾತನಾಡುವ ಅಭ್ಯಾಸ ನಿಮಗಿದೆ. ನೀವೊಬ್ಬ ವಿಕೃತ ಕಾಮಿ. ಅಷ್ಟು ಸುಲಭವಾಗಿ ಜೈಲಿನಿಂದ ಹೊರಕಳಿಸಲಾಗುವುದಿಲ್ಲ’ ಎಂದು ಹೇಳಿತು.
‘ಅದ್ಯಾವ ರೀತಿಯ ಪ್ರಾಧ್ಯಾಪಕ ನೀವು? ಪ್ರಾಧ್ಯಾಪಕ ಎನ್ನುವ ಪದ್ದಕ್ಕೇ ನಿಮ್ಮಿಂದ ಅವಮಾನ’ ಎಂದು ತರಾಟೆಗೆ ತೆಗೆದುಕೊಂಡಿತು.
‘ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಆಗ ನ್ಯಾಯಪೀಠವು, ‘ಜಾಲತಾಣದಲ್ಲಿ ಬಳಸಿದ ಭಾಷೆಯನ್ನು ಕಂಡು ಆಘಾತವಾಗಿದೆ. ಆರೋಪಿಯು ಕೊಳಕು ಮನಃಸ್ಥಿತಿಯ ವ್ಯಕ್ತಿ’ ಎಂದು ಪ್ರತಿಕ್ರಿಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.