ADVERTISEMENT

ಅಸ್ಸಾಂ| ನೇಮಕಾತಿ ಪರೀಕ್ಷೆ ವೇಳೆ ಅಂತರ್ಜಾಲ ಸ್ಥಗಿತ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 14:47 IST
Last Updated 21 ಆಗಸ್ಟ್ 2022, 14:47 IST
   

ಗುವಾಹಟಿ: ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಅಸ್ಸಾಂ ಸರ್ಕಾರವು ಭಾನುವಾರ ಎಂಟು ಗಂಟೆಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಗ್ರೇಡ್‌–3, ಗ್ರೇಡ್‌–4 ಸಿಬ್ಬಂದಿ ನೇಮಕಾತಿಗಾಗಿ ಭಾನುವಾರ ಪ್ರವೇಶ ಪರೀಕ್ಷೆ ನಡೆಸಿತ್ತು. ಸುಮಾರು 14 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಂಜೆ 5.30ರ ವೇಳೆಗೆ ಅಂತರ್ಜಾಲ ಸೇವೆಯನ್ನು ಒದಗಿಸಲಾಯಿತು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ರಾಜ್ಯ ಪೊಲೀಸ್ ಇಲಾಖೆಯು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಜಾರಿಗೊಳಿಸಿತ್ತು. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಒಯ್ಯುವುದನ್ನು (ಸ್ವಿಚ್ ಆಫ್ ಆಗಿದ್ದರು ಕೂಡಾ) ನಿಷೇಧಿಸಲಾಗಿತ್ತು.

ADVERTISEMENT

‘ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ ಸಾರ್ವಜನಿಕರಿಗೆ ತೊಂದರೆಯುಂಟಾಯಿತು. ‘ಅಂತರ್ಜಾಲ ಸೇವೆ ಸ್ಥಗಿತದಿಂದಾಗಿ ಪರೀಕ್ಷೆಯ ಅಧ್ಯಯನಕ್ಕೆ ನನಗೆ ಬಹಳಷ್ಟು ತೊಂದರೆಯಾಯಿತು. ಇದು ಉತ್ತಮ ಸರ್ಕಾರದ ಲಕ್ಷಣವಲ್ಲ’ ಎಂದು ನಾಗರಿಕ ಸೇವಾ ಪರೀಕ್ಷೆಯ ಅಭ್ಯರ್ಥಿ ಸುಜಾತ ಗೌತಮ್ ಎಂಬುವರು ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ್ದು ನೇಮಕಾತಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸುರಕ್ಷಿತ ಕ್ರಮವಾಗಿದೆ’ ಎಂದು ಸರ್ಕಾರವು ಪ್ರತಿಪಾದಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವಿಫಲವಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ.

ಈ ಸಂಬಂಧ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಲೋಕಸಭಾ ಸದಸ್ಯಪರ್ದ್ಯುತ್ ಬೊರ್ಡೊಲೊಯ್, ‘1985ರ ಟೆಲಿಗ್ರಾಂ ನಿಯಮ ಮತ್ತು 2017ರ ತಾತ್ಕಾಲಿಕ ಟೆಲಿಗ್ರಾಂ ಸೇವೆ ಸ್ಥಗಿತಗೊಳಿಸುವ ಸರ್ವೀಸ್ ನಿಯಮಗಳ ಪ್ರಕಾರಸಾರ್ವಜನಿಕ ತುರ್ತು ಪರಿಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸಂದರ್ಭದಲ್ಲಿ ಮಾತ್ರ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ’ ಎಂದಿದ್ದಾರೆ.

ಅಸ್ಸಾಂ ಸರ್ಕಾರವು ಆಗಸ್ಟ್ 28 ಮತ್ತು ಸೆಪ್ಟೆಂಬರ್ 11ರಂದು ಇದೇ ಮಾದರಿಯಲ್ಲಿ ನೇಮಕಾತಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.