ಸಿ.ಅಯನ್ನಪಾತ್ರುಡು
ಚಿತ್ರ: X/@AyyannaPatruduC
ಅಮರಾವತಿ: ನರಸಿಪಟ್ಟಣಂ ಶಾಸಕ ಸಿ.ಅಯ್ಯನ್ನಪಾತ್ರುಡು ಅವರು ಆಂಧ್ರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೇರೆ ಯಾವ ಶಾಸಕರೂ ಸಭಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ. ಹೀಗಾಗಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಪಾತ್ರುಡು ಆಯ್ಕೆ ಔಪಚಾರಿಕವಾಗಿ ನಡೆಯಿತು ಎಂದು ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪಿಪಿಕೆ ರಾಮಾಚಾರ್ಯುಲು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ವಿಧಾನಸಭೆಯ ಮೊದಲ ಅಧಿವಶೇನದ 2ನೇ ದಿನ 10.30ಕ್ಕೆ ಆರಂಭವಾಯಿತು. ಮೊದಲ ದಿನ ಪ್ರಮಾಣವಚನ ಸ್ವೀಕರಿಸಿದ್ದ ಶಾಸಕರು, ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಇಂದು ಪೂರ್ಣಗೊಳಿಸಿದರು.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಇಂದು ಕಡಪ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಸದನಕ್ಕೆ ಬರುವುದು ಅನುಮಾನ. ಮೂಲಗಳ ಪ್ರಕಾರ ಅವರು ಇನ್ನೂ ದಿನಗಳವರೆಗೆ ತಮ್ಮ ಸ್ವಕ್ಷೇತ್ರ ಪುಲಿವೆಂದುಲದಲ್ಲಿ ಉಳಿಯಲಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಕಚೇರಿ ಧ್ವಂಸ
ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯನ್ನು ಇಂದು ನೆಲಸಮಗೊಳಿಸಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ 'ಎನ್‌ಎನ್‌ಐ' ವರದಿ ಮಾಡಿದೆ.
ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿ–ಸಿಆರ್‌ಡಿಎ) ಹಾಗೂ ಮಂಗಲಗಿರಿ ತಡೆಪಲ್ಲಿ ನಗರ ಪಾಲಿಕೆ (ಎಂಟಿಎಂಸಿ) ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮುಂಜಾನೆಯೇ ಕಟ್ಟಡ ನೆಲಸಮಗೊಳಿಸಿದ್ದಾರೆ.
ಸರ್ಕಾರದ ವಿರುದ್ಧ ಗುಡುಗಿರುವ ವೈಎಸ್‌ಆರ್ ಕಾಂಗ್ರೆಸ್, 'ಟಿಡಿಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಎಪಿ–ಸಿಆರ್‌ಡಿಎ ಕ್ರಮವನ್ನು ಪ್ರಶ್ನಿಸಿ ನಮ್ಮ ಪಕ್ಷವು ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯವು ನೆಲಸಮ ಪ್ರಕ್ರಿಯೆ ನಿಲ್ಲಿಸುವಂತೆ ಆದೇಶಿಸಿದೆ. ಆದಾಗ್ಯೂ, ಕಟ್ಟಡ ಧ್ವಂಸಗೊಳಿಸಲಾಗಿದೆ' ಎಂದು ಕಿಡಿಕಾರಿದೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ವೈಎಸ್‌ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.