ADVERTISEMENT

ಆಸ್ತಿಗಳು ದೇಶಕ್ಕೆ ಸೇರಿದ್ದು, ಮೋದಿ ಅಥವಾ ಬಿಜೆಪಿಯದ್ದಲ್ಲ: ಮಮತಾ ಕಿಡಿ

ಪಿಟಿಐ
Published 25 ಆಗಸ್ಟ್ 2021, 12:30 IST
Last Updated 25 ಆಗಸ್ಟ್ 2021, 12:30 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆಯನ್ನು (ಎನ್‌ಎಂಪಿ) ಖಂಡಿಸಿದ್ದು, ಇದು ದೇಶಕ್ಕೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

ಎನ್‌ಎಂಪಿಯನ್ನು 'ಆಘಾತಕಾರಿ' ಹಾಗೂ 'ದುರದೃಷ್ಟಕರ' ನೀತಿ ಎಂದು ಹೇಳಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ, ದೇಶದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸಿಗುವ ಹಣವನ್ನು ಚುನಾವಣೆಗಳಲ್ಲಿ ಬಿಜೆಪಿಯು ವಿರೋಧ ಪಕ್ಷಗಳ ವಿರುದ್ಧ ಬಳಕೆ ಮಾಡಲಿದೆ ಎಂದು ಆರೋಪಿಸಿದ್ದಾರೆ.

'ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಈ ಆಸ್ತಿಗಳು ದೇಶಕ್ಕೆ ಸೇರಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಗೆ ಸೇರಿದ್ದಲ್ಲ. ಕೇಂದ್ರ ಸರ್ಕಾರ ತಮ್ಮಇಚ್ಛೆಯಂತೆ ದೇಶದ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು' ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಈ ಜನವಿರೋಧಿ ನೀತಿಯ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ಹೋರಾಡಬೇಕು ಎಂದವರು ಪ್ರತಿಪಾದಿಸಿದರು.

'ಬಿಜೆಪಿಗೆ ನಾಚಿಕೆಯಾಗಬೇಕು. ರಾಷ್ಟ್ರದ ಆಸ್ತಿಯನ್ನು ಮಾರಾಟ ಮಾಡುವ ಹಕ್ಕನ್ನು ಅವರಿಗೆ ಯಾರೂ ನೀಡಿಲ್ಲ. ಇಡೀ ದೇಶವೇ ಇದರ ವಿರುದ್ಧ ಹೋರಾಡಲಿದೆ' ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರದಂದು ರಾಷ್ಟ್ರೀಯ ನಗದೀಕರಣ ಯೋಜನೆಗೆ (ಎನ್‌ಎಪಿ) ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.