ADVERTISEMENT

ಕೋವಿಡ್‌ಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ಅಸ್ಟ್ರಾಜೆನೆಕಾಗೆ ಹಿನ್ನಡೆ

ಏಜೆನ್ಸೀಸ್
Published 15 ಜೂನ್ 2021, 15:53 IST
Last Updated 15 ಜೂನ್ 2021, 15:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಂಡನ್‌: ಕೋವಿಡ್‌ಗೆ ಔಷಧ ಕಂಡುಹಿಡಿಯುವ ತನ್ನ ಪ್ರಯೋಗದಲ್ಲಿ ಹಿನ್ನಡೆ ಉಂಟಾಗಿರುವುದಾಗಿ ಔಷಧ ತಯಾರಕ ಕ್ಷೇತ್ರದ ದಿಗ್ಗಜ ಅಸ್ಟ್ರಾಜೆನೆಕಾ ಮಂಗಳವಾರ ಹೇಳಿದೆ.

ಎರಡು ಪ್ರತಿಕಾಯಗಳ ಸಂಯೋಜನೆಯಿಂದ ತಯಾರಿಸಲಾಗಿರುವ ಔಷಧವು ರೋಗಲಕ್ಷಣಗಳನ್ನು ಗುಣಪಡಿಸುವಲ್ಲಿ ವಿಫಲವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಅದರ ಮೂರನೇ ಹಾಗೂ ಅಂತಿಮ ಹಂತದ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ.

ADVERTISEMENT

1,121 ಸೋಂಕಿತರ ಮೇಲೆ ಅಸ್ಟ್ರಾಜೆನೆಕಾ ಔಷಧದ ಪ್ರಯೋಗ ನಡೆಸಲಾಗಿತ್ತು. ರೋಗಿಗಳಲ್ಲಿ ಸೋಂಕಿನ ಅಪಾಯಗಳನ್ನು ಕಡಿಮೆ ಮಾಡುವಲ್ಲಿ AZD7442 ಎಂಬ ವೈಜ್ಞಾನಿಕ ಹೆಸರಿನ ಔಷಧವು ಕೇವಲ ಶೇ 33 ಪರಿಣಾಮಕಾರಿತ್ವ ತೋರಿಸಿದೆ. ಇದು ಆಶಾಯದಾಯಕವಲ್ಲ ಎಂದು ಕಂಪನಿ ತಿಳಿಸಿದೆ.

ನಿರಾಶೆಗಳ ನಡುವೆಯೂ ಕಂಪನಿ ಪ್ರಯತ್ನ ಮುಂದುವರಿಸಿದೆ. ಔಷಧವು ಕೋವಿಡ್ ಅನ್ನು ತಡೆಯಬಹುದೇ ಅಥವಾ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದೇ ಎಂದು ನಿರ್ಣಯಿಸಲು ಕಂಪನಿಯು ನಿರಂತರ ಪ್ರಯೋಗಗಳನ್ನು ನಡೆಸುತ್ತಿದೆ.

AZD7442ನ ಅಭಿವೃದ್ಧಿಗೆ ಅಮೆರಿಕವು ಅಸ್ಟ್ರಾಜೆನೆಕಾಗೆ ಧನಸಹಾಯ ಒದಗಿಸಿದ್ದು, 7,00,000 ಡೋಸ್‌ಗಳನ್ನು ಖರೀದಿಸುವುದಾಗಿಯೂ ಭರವಸೆ ನೀಡಿದೆ.

ಅಸ್ಟ್ರಾಜೆನೆಕಾದ ಲಸಿಕೆ ಮೇಲೆ ಹೊಸ ಅನುಮಾನ

ಅಸ್ಟ್ರಾಜೆನೆಕಾ ಸಂಸ್ಥೆಯು ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯು ಹೊಸ ಸುರಕ್ಷತಾ ಶಂಕೆ ಎದುರಿಸಬೇಕಾಗಿ ಬಂದಿದೆ.

ಲಸಿಕೆ ಪಡೆದವರು ರಕ್ತ ಹೆಪ್ಪುಗಟ್ಟಿ ಸಾವಿಗೀಡಾದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಯುರೋಪ್‌ನ ಹಲವು ರಾಷ್ಟ್ರಗಳು ಲಸಿಕೆ ಮೇಲೆ ನಿರ್ಬಂಧ ವಿಧಿಸಿವೆ.

ಪರ್ಯಾಯ ಲಸಿಕೆಗಳು ಲಭ್ಯವಿದ್ದರೆ ಅಸ್ಟ್ರಾಜೆನೆಕಾದ ಲಸಿಕೆಯ ಬಳಕೆಯನ್ನು ನಿಲ್ಲಿಸುವುದು ಯೋಗ್ಯ ಎಂದು ‘ಯುರೋಪಿಯನ್‌ ಮೆಡಿಸಿನ್ಸ್‌ ಏಜೆನ್ಸಿ’ಯ ಉನ್ನತ ಅಧಿಕಾರಿಯೊಬ್ಬರು ಹೇಳಿರುವುದಾಗಿ ಭಾನುವಾರ ವರದಿಯಾಗಿದೆ.

‘ಅಧಿಕಾರಿ ಮಾರ್ಕೊ ಕಾವಲೆರಿಯವರ ಹೇಳಿಕೆಯನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ. ಲಸಿಕೆಯ ಪ್ರಯೋಜನಗಳು ಅದರಲ್ಲಿನ ಅಪಾಯಗಳಿಗಿಂತಲೂ ಮಿಗಿಲು ಎಂದು ಅವರು ನಂಬಿದ್ದಾರೆ,’ ಎಂದು ಯುರೋಪಿಯನ್‌ ಮೆಡಿಸಿನ್ಸ್‌ ಏಜೆನ್ಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.