ಅಯೋಧ್ಯೆಯಲ್ಲಿ ಜನಸಾಗರ
ಪಿಟಿಐ ಚಿತ್ರ
ಅಯೋಧ್ಯೆ: ಇಲ್ಲಿಯ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಅಯೋಧ್ಯೆಯ ಮಹಾನಗರ ಪಾಲಿಕೆ ಮಂದಿರದ ಬಳಿ ಚಪ್ಪಲಿಗಳ ರಾಶಿಯ ಸಮಸ್ಯೆ ಎದುರಿಸುತ್ತಿದೆ.
ರಾಮಮಂದಿರದ ಪ್ರವೇಶ ದ್ವಾರದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಚಪ್ಪಲಿಗಳು ಸಂಗ್ರಹವಾಗುತ್ತಿದ್ದು ನಿರ್ವಹಣೆಯೇ ಸವಾಲಾಗಿದೆ. ಜೆಸಿಬಿಗಳ ಮೂಲಕ ಟ್ರಾಲಿಗಳಲ್ಲಿ ತುಂಬಿ ನಗರದಿಂದ 4–5 ಕಿ.ಮೀ ದೂರಕ್ಕೆ ತೆಗೆದುಕೊಂಡು ಹೋಗಿ ಎಸೆಯಲಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮುಂಚೆ ಗೇಟ್ 1ರಲ್ಲಿ ಭಕ್ತರು ಚಪ್ಪಲಿಗಳನ್ನು ಬಿಡಬೇಕಾಗಿತ್ತು. ಅಲ್ಲಿಂದ ದೇವಾಲಯದೊಳಗೆ ಸುಮಾರು ಅರ್ಧ ಕಿಲೋಮೀಟರ್ ಸುತ್ತಾಡಿ ಮತ್ತೆ ಅಲ್ಲಿಯೇ ಬಂದು ಚಪ್ಪಲಿ ಪಡೆಯುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಮಹಾಕುಂಭ ಮೇಳದ ಪ್ರಯುಕ್ತ ಭಕ್ತರ ಸಂಖ್ಯೆ ದುಪ್ಪಟ್ಟಾದ ಕಾರಣ ಜನರನ್ನು ನಿಯಂತ್ರಿಸಲು ಆಡಳಿತ ಮಂಡಳಿ ಗೇಟ್ 1ರಲ್ಲಿ ಪ್ರವೇಶ ಮತ್ತು ಗೇಟ್ 3ರಲ್ಲಿ ನಿರ್ಗಮನಕ್ಕೆ ವ್ಯವಸ್ಥೆ ಮಾಡಿತ್ತು. ಇವೆರಡು ಗೇಟ್‌ಗಳ ನಡುವೆ ಸುಮಾರು 5–6 ಕಿ.ಮೀ ಅಂತರವಿದ್ದ ಕಾರಣ ಮತ್ತೆ ಗೇಟ್ 1ರ ಬಳಿ ಹೋಗುವ ಬದಲು ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ತೆರಳುತ್ತಿದ್ದಾರೆ. ಇದರಿಂದ ದಿನನಿತ್ಯ ಚಪ್ಪಲಿಗಳ ರಾಶಿಯೇ ಸೃಷ್ಟಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 30 ದಿನಗಳಿಂದ ಈ ಬದಲಾವಣೆ ಮಾಡಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲವಾಗಲು ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.