ADVERTISEMENT

ಕೊರೊನಾ ಕರಿನೆರಳು: ಸ್ವಾತಂತ್ರ್ಯ ದಿನಾಚರಣೆಗೆ ಕೇವಲ 250 ಆಹ್ವಾನಿತರು

ಏಜೆನ್ಸೀಸ್
Published 24 ಜುಲೈ 2020, 4:18 IST
Last Updated 24 ಜುಲೈ 2020, 4:18 IST
ಕೆಂಪುಕೋಟೆ
ಕೆಂಪುಕೋಟೆ   

ನವದೆಹಲಿ: ಜಾಗತಿಕ ಪಿಡುಗು ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಆಹ್ವಾನಿತರ ಪಟ್ಟಿಯನ್ನು 250ಕ್ಕೆ ಇಳಿಸಲಾಗಿದೆ.

ಈಸಮಾರಂಭದಲ್ಲಿ ಶಾಲಾ ಮಕ್ಕಳು ಭಾಗವಹಿಸುವಂತಿಲ್ಲ. ಕುಳಿತುಕೊಳ್ಳಲು ಬಳಸುತ್ತಿದ್ದ ಕ೦ಬಳಿ ಬದಲು ಕುರ್ಚಿಗಳನ್ನು ಹೆಚ್ಚು ಬಳಸಲಾಗುತ್ತದೆ. ಜೊತೆಗೆ, ಪೊಲೀಸರು ಪಿಪಿಇ ಕಿಟ್‌ ಧರಿಸಿರುತ್ತಾರೆಎಂದು ಮೂಲಗಳು ತಿಳಿಸಿರುವುದಾಗಿ ‘ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಮಧ್ಯಾಹ್ನದ ವೇಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕೊರೊನಾ ವಾರಿಯರ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ವೃತ್ತಿಪರರು ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖರಿಗೆ ಆಮಂತ್ರಣ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ADVERTISEMENT

‘ಪ್ರತಿವರ್ಷ ಕೆಂಪುಕೋಟೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿದೇಶಿರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಆಹ್ವಾನಿತರು ಭಾಗವಹಿಸುತ್ತಿದ್ದರು. ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಸುಮಾರು 250 ಆಹ್ವಾನಿತರು ಹಾಜರಿರಲಿದ್ದಾರೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಮಂತ್ರಿಗಳು, ರಾಜತಾಂತ್ರಿಕರು ಸೇರಿದಂತೆ ಇತರೆ ಗಣ್ಯರನ್ನು ಹೊರತುಪಡಿಸಿ ತ್ರಿವರ್ಣ ಧ್ವಜ ಪ್ರತಿಬಿಂಬಿಸುವ ಉಡುಪು ಧರಿಸಿದ್ದ ಸಾವಿರಾರು ಶಾಲಾ ಮಕ್ಕಳು ಸಮಾರಂಭದಲ್ಲಿ ಭಾಗವಹಿಸಿದ್ದರು.

‘ಈ ಬಾರಿ ಎನ್‍ಸಿಸಿ ಕೆಡೆಟ್‍ಗಳನ್ನು ಹೊರತುಪಡಿಸಿ ಯಾವುದೇ ಶಾಲಾ ಮಕ್ಕಳು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಪೊಲೀಸ್‌ ಸಿಬ್ಬಂದ ಪಿಪಿಇ ಕಿಟ್‌ ಧರಿಸಿರುತ್ತಾರೆ. ಹಲವೆಡೆ ಸ್ಯಾನಿಟೇಷನ್ ಘಟಕಗಳನ್ನು ತೆರೆಯಲಾಗುತ್ತದೆ’ ಎಂದು ದೆಹಲಿ ಉತ್ತರ ವಿಭಾಗದ ಉಪ ಪೊಲೀಸ್‌ ಆಯುಕ್ತೆ ಮೋನಿಕಾ ಭಾರದ್ವಾಜ್‌ ತಿಳಿಸಿದ್ದಾರೆ.

ಸಮಾರಂಭ ನಡೆಯುವುದು ಖಚಿತ. ಆದರೆ, ಕಾರ್ಯಕ್ರಮದ ಸ್ವರೂಪ ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಗಸ್ಟ್ 1 ರಿಂದ ಸಾರ್ವಜನಿಕರಿಗೆ ಕೆಂಪುಕೋಟೆ ಪ್ರವೇಶ ನಿಷೇಧಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.