ADVERTISEMENT

ವಾಜಪೇಯಿಯೂ ರೈತರ ಸಮಸ್ಯೆ ಕಡೆಗಣಿಸಿ ಸೋತಿದ್ದರು: ಮೋದಿಗೆ ದೇವೇಗೌಡ ಎಚ್ಚರಿಕೆ

ಸಾಲಮನ್ನಾ ಸೇರಿದಂತೆ ಪರಿಹಾರ ಪ್ಯಾಕೇಜ್ ಘೋಷಿಸಲು ಆಗ್ರಹ

ಪಿಟಿಐ
Published 2 ಜನವರಿ 2019, 3:11 IST
Last Updated 2 ಜನವರಿ 2019, 3:11 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ನವದೆಹಲಿ:‘ರೈತರ ಸಮಸ್ಯೆಗಳನ್ನು ಕಡೆಗಣಿಸಿದ್ದಕ್ಕೆಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಸಹ ಸೋಲನುಭವಿಸಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿರೈತರ ಕಷ್ಟ ಅರ್ಥಮಾಡಿಕೊಂಡು ಸಾಲಮನ್ನಾ ಸೇರಿದಂತೆ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

‘ವಾಜಪೇಯಿ ಪ್ರಧಾನಿಯಾಗಿದ್ದಾಗ ಕರ್ನಾಟಕದಿಂದ 2,500 ರೈತರನ್ನು ಕರೆದುಕೊಂಡು ದೆಹಲಿಗೆ ಬಂದಿದ್ದೆ. ಆಗ ಪರಿಸ್ಥಿತಿ ಶೋಚನೀಯವಾಗಿತ್ತು. ಆ ಅವಧಿಯಲ್ಲಿ ಸುಮಾರು 1,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಷ್ಟ್ರಮಟ್ಟದಲ್ಲಿ 10,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರಿಗೆ ನೆರವಾಗುವುದಾಗಿ ವಾಜಪೇಯಿ ಭರವಸೆ ನೀಡಿದ್ದರು. ಆದರೆ ಅವರ ಪಕ್ಷವು ‘ಇಂಡಿಯಾ ಶೈನಿಂಗ್’ ಧ್ಯೇಯವಾಕ್ಯದೊಂದಿಗೆ ಚುನಾವಣೆ ಎದುರಿಸಿ ಸೋಲನುಭವಿಸಿತ್ತು’ ಎಂದು ದೇವೇಗೌಡ ಹೇಳಿದ್ದಾರೆ.

ಕರ್ನಾಟಕದ ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರದ ₹44,000 ಕೋಟಿ ಮೊತ್ತದ ಸಾಲಮನ್ನಾ ಯೋಜನೆಯ ಪ್ರಯೋಜನ ಕೆಲವು ರೈತರಿಗೆ ಮಾತ್ರ ಆಗಿದೆ ಎಂದು ಇತ್ತೀಚೆಗೆ ಹೇಳಿದ್ದ ಮೋದಿ, ಯೋಜನೆಯ ಬಗ್ಗೆ ವ್ಯಂಗ್ಯವಾಡಿದ್ದರು.

ADVERTISEMENT

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತರನ್ನು ಶಾಂತಗೊಳಿಸುವ ಬಗ್ಗೆ ಮೋದಿ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದೂ ದೇವೇಗೌಡ ಹೇಳಿದ್ದಾರೆ.

‘ಬಹುಶಃ ಅವರು (ಮೋದಿ) ಬಜೆಟ್‌ಗೂ ಮುನ್ನ ಕೆಲವು ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸುವ ಸಾಧ್ಯತೆ ಇದೆ. ಇಡೀ ದೇಶದ ರೈತರ ಸಾಲಮನ್ನಾ ಘೋಷಿಸಿದರೂ ಅದನ್ನು ನಾವು ಸ್ವಾಗತಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ರೈತರನ್ನು ಕಡೆಗಣಿಸಿದ ಯಾವ ಸರ್ಕಾರವೂ ಉಳಿದಿಲ್ಲ. ರೈತ ಸಮುದಾಯವನ್ನು ಕಡೆಗಣಿಸಿದ ಸರ್ಕಾರಕ್ಕೆ ರೈತರೇ ಪಾಠ ಕಲಿಸುತ್ತಾರೆ. ಶೇ 70ಕ್ಕಿಂತಲೂ ಹೆಚ್ಚಿರುವ ರೈತ ಸಮುದಾಯದೇಶದ 125 ಕೋಟಿ ಜನರಿಗೆ ಆಹಾರ ಒದಗಿಸುತ್ತಿದೆ. ಅವರು ಬಿಸಿಲಿಗೆ ಮೈಯೊಡ್ಡಿ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಾರೆ. ಅವರನ್ನು ಕಡೆಗಣಿಸಿ ಸರ್ಕಾರ ಸುರಕ್ಷಿತವಾಗಿರಬಹುದು ಎಂದು ನೀವು ಭಾವಿಸುತ್ತೀರಾ? ಖಂಡಿತಾ ಸಾಧ್ಯವಿಲ್ಲ’ ಎಂದು ದೇವೇಗೌಡ ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭೆ ಚುನಾವಣೆಗಳಲ್ಲಿ ಸೋಲನುಭವಿಸಿದ ಬಳಿಕ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು; ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿದವರಿಗೆ ಕೃಷಿ ಸಾಲಗಳ ಬಡ್ಡಿ ಮನ್ನಾ, ಉಚಿತ ಬೆಳೆವಿಮೆ ಸೇರಿದಂತೆ ಹಲವು ಯೋಜನೆಗಳ ಘೋಷಣೆಗೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.