ದೆಹಲಿ ಸಿಎಂ ಆತಿಶಿ– ರಮೇಶ್ ಬಿಧೂಡಿ
ನವದೆಹಲಿ: ಬಿಜೆಪಿ ಮುಖಂಡ ರಮೇಶ್ ಬಿಧೂಡಿ ಅವರು ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ಕಣ್ಣೀರಿಟ್ಟರು.
ಕಾಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂಡಿ ಅವರು, ದೆಹಲಿ ಮುಖ್ಯಮಂತ್ರಿ ಆತಿಶಿ ತಮ್ಮ ‘ತಂದೆಯನ್ನೇ ಬದಲಾಯಿಸಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.
ಬಿಧೂಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಆತಿಶಿ, ‘ಶಿಕ್ಷಕರಾಗಿದ್ದ ನನ್ನ ತಂದೆ ವೃತ್ತಿಜೀವನದುದ್ದಕ್ಕೂ ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಕಲಿಸಿದ್ದಾರೆ. ಈಗ ಅವರಿಗೆ 80 ವರ್ಷವಾಗಿದ್ದು, ಇನ್ನೊಬ್ಬರ ನೆರವಿಲ್ಲದೆ ಅತ್ತಿತ್ತ ಓಡಾಡಲು ಸಾಧ್ಯವಿಲ್ಲ. ಈಗ ಚುನಾವಣೆ ಸಮಯದಲ್ಲಿ ಮತಗಳಿಕೆಗಾಗಿ ನೀವು ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತೀರಾ? ವಯಸ್ಸಾದ ವ್ಯಕ್ತಿಯನ್ನು ಈ ರೀತಿ ನಿಂದಿಸುತ್ತೀರಾ?’ ಎನ್ನುತ್ತಾ ಕಣ್ಣೀರಿಟ್ಟರು.
‘ರಾಜಕೀಯವು ಈ ಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಬಿಧೂಡಿ ಅವರು ದಕ್ಷಿಣ ದೆಹಲಿ ಕ್ಷೇತ್ರದಿಂದ 10 ವರ್ಷ ಸಂಸದರಾಗಿದ್ದರು. ನನ್ನ ತಂದೆಯನ್ನು ನಿಂದಿಸಿ ಮತ ಕೇಳುವ ಬದಲು, ಕಾಲ್ಕಾಜಿಯ (ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ) ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂಬುದನ್ನು ಅವರು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.
ಆತಿಶಿ ವಿರುದ್ಧ ರಮೇಶ್ ಬಿಧೂಡಿ ಹೇಳಿದ್ದೇನು?
‘ಆತಿಶಿ ಅವರು ತಮ್ಮ ತಂದೆಯನ್ನು ಬದಲಾಯಿಸಿಕೊಂಡಿದ್ದಾರೆ. ಮೊದಲು ಅವರು ಮಾರ್ಲೆನಾ ಆಗಿದ್ದರು. ಈಗ ಸಿಂಗ್ ಆಗಿದ್ದಾರೆ. ಅವರು ತಂದೆಯನ್ನು ಬದಲಾಯಿಸಿದ್ದಾರೆ. ಇದು ಅವರ ವ್ಯಕ್ತಿತ್ವ’ ಎಂದು ದೆಹಲಿಯ ರ್‍ಯಾಲಿಯೊಂದರಲ್ಲಿ ಬಿಧೂಡಿ ಹೇಳಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ಆತಿಶಿ ಅವರಿಗೆ, ತಂದೆ–ತಾಯಿ ‘ಆತಿಶಿ ಮಾರ್ಲೆನಾ’ ಎಂಬ ಹೆಸರು ಇಟ್ಟಿದ್ದರು. ಮಾರ್ಕ್ಸ್ ಮತ್ತು ಲೆನಿನ್ ಹೆಸರನ್ನು ಒಗ್ಗೂಡಿಸಿ ‘ಮಾರ್ಲೆನಾ’ ಎಂಬ ಹೆಸರನ್ನು ಇವರಿಗೆ ನೀಡಲಾಗಿತ್ತು. ಆದರೆ ವಿರೋಧಿಗಳು, ‘ಆತಿಶಿ ಕ್ರೈಸ್ತ ಧರ್ಮಕ್ಕೆ ಸೇರಿದವರು’ ಎಂದು ಅಪಪ್ರಚಾರ ನಡೆಸಿದ ಕಾರಣಕ್ಕೆ ‘ಮಾರ್ಲೆನಾ’ ಪದವನ್ನು ಹೆಸರಿನಿಂದ ಕೈಬಿಟ್ಟಿದ್ದರು. ತಮ್ಮನ್ನು ಆತಿಶಿ ಎಂದಷ್ಟೇ ಕರೆದುಕೊಳ್ಳುತ್ತಿದ್ದರು. ಕೆಲವು ಕಾಲ ಅವರು ತಮ್ಮನ್ನು ‘ಆತಿಶಿ ಸಿಂಗ್’ ಎಂದೂ ಕರೆದುಕೊಂಡಿದ್ದರು ಎಂದು ಬಿಧೂಡಿ ಹೇಳಿದ್ದಾರೆ.
ಬಿಧೂಡಿ ಅವರ ಮಾತುಗಳನ್ನು ‘ಎಕ್ಸ್’ ಮೂಲಕ ಹಂಚಿಕೊಂಡಿರುವ ಅರವಿಂದ ಕೇಜ್ರಿವಾಲ್, ‘ಬಿಜೆಪಿ ನಾಯಕರು ಲಜ್ಜೆಗೇಡಿತನದ ಎಲ್ಲ ಮಿತಿಗಳನ್ನೂ ಮೀರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ‘ಅಕ್ರಮ’ ಬಯಲು: ಬಿಜೆಪಿ
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ಹಿಂದೆ ವಾಸವಿದ್ದ ಅಧಿಕೃತ ನಿವಾಸ ‘ಶೀಶ್ ಮಹಲ್’ಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯು 139 ಪ್ರಶ್ನೆಗಳನ್ನು ಎತ್ತಿದೆ ಮತ್ತು ಅವರ ‘ಅಕ್ರಮ’ಗಳನ್ನು ಬಯಲುಗೊಳಿಸಿದೆ ಎಂದು ಬಿಜೆಪಿ ಹೇಳಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ‘ಶೀಶ್ ಮಹಲ್ ನವೀಕರಣದ ಹೆಸರಿಲ್ಲಿ ಭಾರಿ ಅವ್ಯವಹಾರ ನಡೆದಿದೆ. 2022ರವರೆಗೆ ನಿವಾಸಕ್ಕಾಗಿ ₹33.86 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ. 2023 ಮತ್ತು 2024ರಲ್ಲಿ ಮಾಡಿರುವ ವೆಚ್ಚ ಇನ್ನೂ ಬಹಿರಂಗವಾಗಿಲ್ಲ. ನಮಗೆ ಲಭಿಸಿದ ಮಾಹಿತಿ ಪ್ರಕಾರ ಪೀಠೋಪಕರಣ ಸೇರಿದಂತೆ ಎಲ್ಲ ವಸ್ತುಗಳನ್ನೂ ಲೆಕ್ಕ ಹಾಕಿದರೆ ಶೀಶ್ ಮಹಲ್‌ಗೆ ₹ 75 ಕೋಟಿಯಿಂದ ₹80 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.