ಆತಿಶಿ
ನವದೆಹಲಿ: ದೆಹಲಿಯಲ್ಲಿ ಎಎಪಿ ಅಧಿಕಾರ ಕಳೆದುಕೊಂಡು ಬಿಜೆಪಿ ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ನಗರದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ನಿರ್ಗಮಿತ ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ದೆಹಲಿಯಲ್ಲಿ ಎಎಪಿ ಅಧಿಕಾರ ಕಳೆದುಕೊಂಡ ಮೂರೇ ದಿನದಲ್ಲಿ ನಗರದ 40ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಜನರ ಈಗ ಇನ್‌ವರ್ಟರ್ ಖರೀದಿಸಲು ಮುಂದಾಗಿದ್ದಾರೆ. ಎಎಪಿ ಅಧಿಕಾರದಲ್ಲಿದ್ದಾಗ ವಿದ್ಯುತ್ ವಲಯವನ್ನು ನಿರಂತರವಾಗಿ ಗಮನಿಸುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೂರು ದಿನದಲ್ಲಿ ಅದು ಕುಸಿದಿದೆ. ಬಿಜೆಪಿಗೆ ಹೇಗೆ ಅಧಿಕಾರ ನಡೆಸಬೇಕು ಎನ್ನುವುದು ಗೊತ್ತಿಲ್ಲ. ಉತ್ತರ ಪ್ರದೇಶದಲ್ಲಿ ಇರುವಂತೆ ದೆಹಲಿಯಲ್ಲಿಯೂ ವಿದ್ಯುತ್ ಸಮಸ್ಯೆ ತಲೆದೂರುವಂತೆ ಮಾಡಲಿದೆ. ಈ ಮೂಲಕ ಬಿಜೆಪಿ ರಾಷ್ಟ್ರ ರಾಜಧಾನಿ ದೆಹಲಿಯನ್ನು ಉತ್ತರ ಪ್ರದೇಶವನ್ನಾಗಿಸಲಿದೆ’ ಎಂದು ಆರೋಪಿಸಿದರು.
ಈ ಕುರಿತು ಬಿಜೆಪಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ 26 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಇನ್ನಷ್ಟೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ ಸರ್ಕಾರ ರೂಪಿಸಬೇಕಿದೆ.
ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಿಂದ ವಾಪಸಾದ ಮೇಲೆ ಸರ್ಕಾರ ರಚನೆ ಪ್ರಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.