ADVERTISEMENT

ಇಂಫಾಲ್‌: ಕಮಾಂಡೊಗಳಿಂದ ಸಾಂಕೇತಿಕ ’ಶಸ್ತ್ರ ತ್ಯಾಗ’ ಪ್ರತಿಭಟನೆ

ಪಿಟಿಐ
Published 28 ಫೆಬ್ರುವರಿ 2024, 14:37 IST
Last Updated 28 ಫೆಬ್ರುವರಿ 2024, 14:37 IST
–
   

ಇಂಫಾಲ್‌: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ನಿವಾಸದ ಮೇಲೆ ಗುಂಪೊಂದು ದಾಳಿ ನಡೆಸಿದ್ದನ್ನು ಖಂಡಿಸಿ, ಮಣಿಪುರ ಪೊಲೀಸ್‌ನ ನೂರಾರು ಕಮಾಂಡೊಗಳು ಸಾಂಕೇತಿಕ ‘ಶಸ್ತ್ರ ತ್ಯಾಗ’ ಮಾಡುವ ಮೂಲಕ ಬುಧವಾರ ಪ್ರತಿಭಟನೆ ವ್ಯಕ್ತಪಡಿಸಿದರು.

ಮೈತೇಯಿ ಸಮುದಾಯದ ಅರಂಬಾಯಿ ತೆಂಗೋಲ್‌ ಸಂಘಟನೆ ಕಾರ್ಯಕರ್ತರ ಗುಂಪೊಂದು, ಇಂಫಾಲ್‌ ನಗರದ ವಾಂಗ್‌ಖಿ ಪ್ರದೇಶದಲ್ಲಿರುವ ಎಎಸ್‌ಪಿ ಎಂ. ಅಮಿತ್‌ ಸಿಂಗ್‌ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿತ್ತಲ್ಲದೇ, ಹಲವು ಸುತ್ತು ಗುಂಡು ಹಾರಿಸಿತ್ತು. ನಂತರ ಅವರನ್ನು ಅಪಹರಿಸಿತ್ತು. 

ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಮಿತ್‌ ಸಿಂಗ್‌ ಅವರನ್ನು ರಕ್ಷಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಅಸ್ಸಾಂ ರೈಫಲ್ಸ್‌ನ ನಾಲ್ಕು ತುಕಡಿಗಳನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ.

ADVERTISEMENT

‘ಎಎಸ್‌ಪಿ ನಿವಾಸದ ಮೇಲಿನ ದಾಳಿಯನ್ನು ಖಂಡಿಸಿ ಪಶ್ಷಿಮ ಇಂಫಾಲ್‌ ಜಿಲ್ಲೆಯ ಕಮಾಂಡೊಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಸಾಂಕೇತಿಕವಾಗಿ ಶಸ್ತ್ರ ತ್ಯಾಗ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಪೂರ್ವ ಇಂಫಾಲ್‌, ವಿಷ್ಣುಪುರ ಹಾಗೂ ಥೌಬಲ್‌ ಜಿಲ್ಲೆಯಲ್ಲಿರುವ ಕಮಾಂಡೊಗಳು ಕೂಡ ಸಾಂಕೇತಿಕ ‘ಶಸ್ತ್ರ ತ್ಯಾಗ’ ಪ್ರತಿಭಟನೆ ನಡೆಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ, ಸಂಘಟನೆಯ ಕಾರ್ಯಕರ್ತರ ಗುಂಪು ದಾಳಿ ನಡೆಸಿತು. ವಾಹನ ಕಳುವು ಪ್ರಕರಣಕ್ಕೆ ಸಂಬಂಧಿಸಿ ಸಂಘಟನೆಯ ಆರು ಜನರನ್ನು ಅಮಿತ್‌ ಸಿಂಗ್‌ ಈಚೆಗೆ ಬಂಧಿಸಿದ್ದರು. ಇದೇ ಕಾರಣಕ್ಕೆ ಅಧಿಕಾರಿ ಮೇಲೆ ದಾಳಿ ನಡೆಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರ ನಿವಾಸದ ಆವರಣದಲ್ಲಿ ನಿಲುಗಡೆ ಮಾಡಲಾಗಿದ್ದ ನಾಲ್ಕು ವಾಹನಗಳಿಗೆ ಹಾನಿ ಮಾಡಿರುವ ಗುಂಪು, ಮನೆಯ ಕಿಟಕಿಗಳು ಹಾಗೂ ಹೂಕುಂಡಗಳನ್ನು ಒಡೆದು ಹಾಕಿದೆ.

ಆರು ಜನರ ಬಿಡುಗಡೆಗೆ ಒತ್ತಾಯಿಸಿ, ಮೈತೇಯಿ ಸಮುದಾಯದ ಮಹಿಳೆಯರ ಗುಂಪು ‘ಮೀರಾ ಪೈಬೀಸ್‌’ ಸದಸ್ಯರು ಪ್ರತಿಭಟನೆ ನಡೆಸಿ, ರಸ್ತೆ ಬಂದ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.