ADVERTISEMENT

ನೇತಾಜಿ ಕೊಡುಗೆ ಕಡೆಗಣನೆ ಯತ್ನ: ಮೋದಿ

ಬೋಸ್‌ 126ನೇ ಹುಟ್ಟುಹಬ್ಬ l 21 ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 17:24 IST
Last Updated 23 ಜನವರಿ 2023, 17:24 IST
ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್‌ ಅವರಿಗೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಸೋಮವಾರ ಪುಷ್ಪನಮನ ಸಲ್ಲಿಸಿದ ಬಳಿಕ ಕೆಲ ಕ್ಷಣಗಳನ್ನು ಆತ್ಮೀಯವಾಗಿ ಕಳೆದರು  –-ಪಿಟಿಐ ಚಿತ್ರ
ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇತಾಜಿ ಸುಭಾಸ್ ಚಂದ್ರ ಬೋಸ್‌ ಅವರಿಗೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಸೋಮವಾರ ಪುಷ್ಪನಮನ ಸಲ್ಲಿಸಿದ ಬಳಿಕ ಕೆಲ ಕ್ಷಣಗಳನ್ನು ಆತ್ಮೀಯವಾಗಿ ಕಳೆದರು  –-ಪಿಟಿಐ ಚಿತ್ರ   

ಪೋರ್ಟ್‌ ಬ್ಲೇರ್‌: ‘ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರ ಕೊಡುಗೆಯನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಇಡೀ ದೇಶ ಇಂದು ಅವರನ್ನು ನೆನಪಿಸಿಕೊಳ್ಳುತ್ತಿದೆ. ವಸಾಹತುಶಾಹಿ ಆಳ್ವಿಕೆಗೆ ತೋರಿದ ಪ್ರತಿರೋಧಕ್ಕಾಗಿ ನೇತಾಜಿ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಅವರ ಚಿಂತನೆಗಳಿಂದ ನಾನು ಭಾರಿ ಪ್ರಭಾವಕ್ಕೆ ಒಳಗಾಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರ ಹೆಸರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸ್ಮಾರಕದ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ
ಅನಾವರಣಗೊಳಿಸಿದ್ದಾರೆ. ಇದು ಅಂಡಮಾನ್‌–ನಿಕೋಬಾರ್‌ ದ್ವೀಪದಲ್ಲಿ ನಿರ್ಮಾಣ ಆಗಲಿದೆ. ಈ ಸ್ಮಾರಕವು ಜನರಲ್ಲಿ ದೇಶಪ್ರೇಮದ ಭಾವನೆಯನ್ನು ತುಂಬಲಿದೆ ಎಂದು ಮೋದಿ ಹೇಳಿದ್ದಾರೆ.

ನೇತಾಜಿ ಅವರ 126ನೇ ಜನ್ಮದಿನದ ಪ್ರಯುಕ್ತ ಈ ಕಾರ್ಯಕ್ರಮ ನಡೆದಿದೆ. ಮೋದಿ ಅವರು ವರ್ಚುವಲ್‌ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾದರು. 21 ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು ಇರಿಸಲಾಗಿದೆ.

ADVERTISEMENT

‘ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಜನರನ್ನು ಉದ್ದೇಶಿಸಿ ಮಾತನಾಡುವ ಈ ಕ್ಷಣವು ನನಗೆ ಬಹಳ ಹೆಮ್ಮೆಯದ್ದಾಗಿದೆ. ಇಲ್ಲಿ 1943ರಲ್ಲಿ ಮೊದಲ ಬಾರಿಗೆ ನೇತಾಜಿ ಅವರು ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ್ದರು’ ಎಂದು ಮೋದಿ ಹೇಳಿದರು.

ನೇತಾಜಿ ಅವರು 1943ರ ಡಿಸೆಂಬರ್‌ 30ರಂದು ಇಲ್ಲಿ ಧ್ವಜಾರೋಹಣ ಮಾಡಿದ್ದರು.

ನೇತಾಜಿ ಅವರಿಗೆ ಸಂಬಂಧಿಸಿದ ಗೋಪ್ಯ ಕಡತಗಳನ್ನು ಬಹಿರಂಗ ಮಾಡಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಆದರೆ, ತಮ್ಮ ಸರ್ಕಾರ ಬಂದ ಮೇಲಷ್ಟೇ ಕಡತಗಳನ್ನು ಬಹಿರಂಗಪಡಿಸಲಾಯಿತು ಎಂದು ಮೋದಿ ಹೇಳಿದ್ದಾರೆ.

ಸ್ಮಾರಕದಲ್ಲಿ ಏನಿರಲಿದೆ?: ಸ್ಮಾರಕವು ಒಂದು ವಸ್ತುಸಂಗ್ರಹಾಲಯವನ್ನು ಹೊಂದಿರಲಿದೆ. ಜೊತೆಗೆ, ಇಲ್ಲಿಗೆ ರೋಪ್‌ ವೇ ಮೂಲಕ ಕೇಬಲ್‌ ಸಂಪರ್ಕ ಇರುತ್ತದೆ. ಲೇಸರ್‌ ಶೋ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಉದ್ಯಾನ ಇರಲಿದೆ. ಹೋಟೆಲ್‌ ಕೂಡ ತೆರೆಯಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.