ADVERTISEMENT

‘ಲೈಂಗಿಕ ದೌರ್ಜನ್ಯ ಆರೋಪಿಗೆ ಸಂತ್ರಸ್ತೆಯಿಂದ ರಕ್ಷಾಬಂಧನ ಆದೇಶ, ಒಂದು ನಾಟಕ’

ಮಧ್ಯಪ್ರದೇಶದ ಹೈಕೋರ್ಟ್‌ ಆದೇಶ ಖಂಡಿಸಬೇಕು–ಅಟರ್ನಿ ಜನರಲ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 14:18 IST
Last Updated 2 ನವೆಂಬರ್ 2020, 14:18 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ‘ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು’ ಎಂದು ಆರೋಪಿಗೆ ನಿರ್ದೇಶಿಸಿದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವು ‘ನಾಟಕ’ ಹಾಗೂ ಇದನ್ನು ‘ಖಂಡಿಸಬೇಕು’ ಎಂದು ಅಟರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದರು.

‘ನ್ಯಾಯಾಧೀಶರಿಗೆ ಲಿಂಗ ಸೂಕ್ಷ್ಮತೆಯನ್ನು ಕಲಿಸಬೇಕು. ಇಂಥ ಆದೇಶವು ಸೂಕ್ತವಲ್ಲ ಎನ್ನುವುದನ್ನು ರಾಷ್ಟ್ರೀಯ ಕಾನೂನು ಅಕಾಡೆಮಿ ಮತ್ತು ರಾಜ್ಯ ಅಕಾಡೆಮಿಗಳು ತಿಳಿಯಪಡಿಸಬೇಕು. ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಲಿಂಗ ಸೂಕ್ಷ್ಮತೆಯ ಪಠ್ಯವಿರಬೇಕು’ ಎಂದು ವೇಣುಗೋಪಾಲ್‌ ತಿಳಿಸಿದರು.

‘ಸಂತ್ರಸ್ತೆಗೆ ₹11 ಸಾವಿರ ಪರಿಹಾರ ನೀಡಿ ಅವರ ಆಶೀರ್ವಾದ ಪಡೆಯಬೇಕು. ಸಂತ್ರಸ್ತೆಯ ಮಗನಿಗೆ ಬಟ್ಟೆ ಹಾಗೂ ಸಿಹಿತಿಂಡಿ ಖರೀದಿಸಲು ₹5 ಸಾವಿರ ನೀಡಬೇಕು’ ಎಂದೂ ಮಧ್ಯಪ್ರದೇಶ ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿತ್ತು. ಇದರ ಸಿಂಧುತ್ವ ಪ್ರಶ್ನಿಸಿ ಅಪರ್ಣಾ ಭಟ್‌ ನೇತೃತ್ವದ ಮಹಿಳಾ ವಕೀಲರ ಗುಂಪು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಜಾಮೀನಿಗೆ ಈ ರೀತಿ ವಿಚಿತ್ರವಾದ ಷರತ್ತು ಹಾಕಬಾರದು. ಇದು ಕಾನೂನಿಗೆ ವಿರುದ್ಧ. ಇಂಥ ಆದೇಶಗಳನ್ನು ಹಲವು ರಾಜ್ಯಗಳಲ್ಲಿ ನೀಡಲಾಗಿದೆ ಎಂದು ವಕೀಲರ ಗುಂಪು ವಾದಿಸಿತ್ತು. ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದರು.

ADVERTISEMENT

‘ಸಂತ್ರಸ್ತೆಯ ಮಾನಸಿಕ ಆಘಾತವನ್ನು ಗಣನೆಗೆ ತೆಗೆದುಕೊಳ್ಳದೆ, ಜಾಮೀನಿಗೆ ಷರತ್ತಾಗಿ ಸಂತ್ರಸ್ತೆಯ ಕೈಯಿಂದ ಆರೋಪಿಯು ರಾಖಿ ಕಟ್ಟಿಸಿಕೊಳ್ಳಬೇಕು ಎನ್ನುವ ನಿರ್ದೇಶನವನ್ನು ನ್ಯಾಯಾಲಯ ನೀಡಬಹುದೇ’ ಎನ್ನುವ ಕುರಿತು ಪ್ರತಿಕ್ರಿಯೆ ನೀಡಲು ಅ.16ರಂದು ಸುಪ್ರೀಂ ಕೋರ್ಟ್‌ ಅಟಾರ್ನಿ ಜನರಲ್‌ ಅವರಿಗೆ ನೋಟಿಸ್‌ ನೀಡಿತ್ತು.

‘ಈ ವಿಷಯದ ಕುರಿತಾಗಿ ನ್ಯಾಯಾಧೀಶರುಗಳಿಗೆ ಮಾರ್ಗಸೂಚಿಗಳನ್ನು ನ.27ರಂದು ಪ್ರಕಟಿಸುವುದಾಗಿ’ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ಅವರಿದ್ದ ಪೀಠವು ತಿಳಿಸಿತು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡುವಾಗ ಷರತ್ತು ವಿಧಿಸುವ ಸಂದರ್ಭದಲ್ಲಿ, ಸಂತ್ರಸ್ತೆಯ ಪರವಾಗಿ ಲಿಂಗಸೂಕ್ಷ್ಮತೆಯನ್ನು ಮತ್ತಷ್ಟು ಸುಧಾರಿಸಲು ಸಲಹೆಯನ್ನು ಶಿಫಾರಸು ಮಾಡುವಂತೆ ಅಟರ್ನಿ ಜನರಲ್‌, ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ದುಷ್ಯಂತ್‌ ದಾವೆ ಹಾಗೂ ಹಿರಿಯ ವಕೀಲ ಸಂಜಯ್‌ ಪರಿಖ್‌ ಅವರಿಗೆ ಪೀಠವು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.